ಉದಯವಾಹಿನಿ, ಬೆಂಗಳೂರು: ಗುತ್ತಿಗೆಯಲ್ಲಿ ಮೀಸಲಾತಿ ನೀಡಿದ ಬಳಿಕ ಈಗ ವಸತಿ ಯೋಜನೆಯಲ್ಲೂ ಮುಸ್ಲಿಮರ ಮೀಸಲಾತಿ ಹೆಚ್ಚಳಕ್ಕೆ ಸರ್ಕಾರ ಮುಂದಾಗಿದೆ.ಹೌದು. ತಮ್ಮ ಸಮುದಾಯಕ್ಕೆ ವಸತಿ ಯೋಜನೆಯಲ್ಲೂ ಮೀಸಲಾತಿಯನ್ನು ಹೆಚ್ಚಿಸುವಂತೆ ವಸತಿ ಇಲಾಖೆ ಸಚಿವ ಜಮೀರ್ ಅಹಮದ್ ಸರ್ಕಾರದ ಮುಂದೆ ಪ್ರಸ್ತಾಪ ಇಟ್ಟಿದ್ದಾರೆ.ಇಂದು ನಡೆಯಲಿರುವ ಕ್ಯಾಬಿನೆಟ್ ಸಭೆಯಲ್ಲಿ ಈ ವಿಷಯನ್ನು ಜಮೀರ್ ಅಹಮದ್ ತೆಗೆದುಕೊಂಡು ಬಂದಿದ್ದು ಇಂದು ಚರ್ಚೆಯಾಗಲಿದೆ.
ರಾಜ್ಯಾದ್ಯಂತ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಸತಿ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುವ ವಿವಿಧ ವಸತಿ ಯೋಜನೆಯಡಿ ನಿಗದಿಪಡಿಸುವ ಗುರಿಯಲ್ಲಿ ಅಲ್ಪಸಂಖ್ಯಾತರಿಗೆ 10% ಮೀಸಲಾತಿ ನಿಗದಿಯಾಗಿದೆ. ಈ ಮೀಸಲಾತಿಯನ್ನು 15% ಏರಿಕೆ ಮಾಡುವ ಸಂಬಂಧ ಕ್ಯಾಬಿನೆಟ್‌ನಲ್ಲಿ ಚರ್ಚೆ ನಡೆಸಿ ಇಂದು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ಗುತ್ತಿಗೆಯಲ್ಲೂ ಮೀಸಲಾತಿ: ಗುತ್ತಿಗೆ ಮೀಸಲಾತಿಯು ಈವರೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಪ್ರವರ್ಗ 1ರವರೆಗೆ ಅನ್ವಯವಾಗುತ್ತಿತ್ತು. ಈ ಸೌಲಭ್ಯವನ್ನು ಮುಸ್ಲಿಮರಿಗೆ (ಪ್ರವರ್ಗ 2–ಬಿ) ವಿಸ್ತರಿಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿತ್ತು. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 7ರಂದು ಮಂಡಿಸಿದ ಬಜೆಟ್‌ನಲ್ಲಿ ಮೀಸಲಾತಿ ನೀಡುವ ಬಗ್ಗೆ ಘೋಷಣೆ ಮಾಡಿದ್ದರು. ವಿಪಕ್ಷಗಳ ವಿರೋಧದ ಮಧ್ಯೆ ಸರ್ಕಾರ ಬಜೆಟ್ ಅಧಿವೇಶನದಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಗೆ ಒಪ್ಪಿಗೆ ನೀಡಿತ್ತು.ಮಸೂದೆ ಕಾಯ್ದೆಯಾಗಿ ಜಾರಿಯಾದರೆ 2 ಕೋಟಿ ರೂ. ವೆಚ್ಚದ ಕಾಮಗಾರಿಗಳು, 1 ಕೋಟಿ ರೂ.ವರೆಗಿನ ಸರಕು ಮತ್ತು ಸೇವೆಗಳ ಪೂರೈಕೆಯ ಟೆಂಡರ್‌ನಲ್ಲಿ ಮುಸ್ಲಿಮರಿಗೆ 4% ಮೀಸಲಾತಿ ಸಿಗಲಿದೆ. ರಾಜ್ಯ ಸರ್ಕಾರ ಕಳುಹಿಸಿದ್ದ ಈ ಮಸೂದೆಯನ್ನು ರಾಜ್ಯಪಾಲ ಥಾವರ್ ಸಿಂಗ್ ಗೆಹ್ಲೋಟ್ ಅವರು ರಾಷ್ಟ್ರಪತಿಗಳಿಗೆ ಕಳುಹಿಸಿದ್ದಾರೆ.
