ಉದಯವಾಹಿನಿ, ನವದೆಹಲಿ: ನಟ, ರಾಜಕಾರಣಿ ಕಮಲ್ ಹಾಸನ್ ಅವರ `ಥಗ್ ಲೈಫ್’ ಚಿತ್ರ ಬಿಡುಗಡೆಯ ಸಂದರ್ಭದಲ್ಲಿ ಹಿಂಸಾಚಾರ, ಬೆದರಿಕೆ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳದ ಕರ್ನಾಟಕ ಸರ್ಕಾರ ಮತ್ತು ರಾಜ್ಯ ಚಲನಚಿತ್ರ ಮಂಡಳಿಯನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.ಚಿತ್ರದ ಮೇಲೆ ಯಾವುದೇ ನಿರ್ಬಂಧ ಹೇರಿಲ್ಲ. ನಿರ್ಮಾಪಕರು ಸಿನಿಮಾ ಬಿಡುಗಡೆ ಮಾಡಲು ಮನಸ್ಸು ಮಾಡಿದರೆ ಸಂಪೂರ್ಣ ಭದ್ರತೆಯನ್ನು ಒದಗಿಸುವುದಾಗಿ ರಾಜ್ಯ ಸರ್ಕಾರ ಸಲ್ಲಿಸಿದ ಅಫಿಡವಿಟ್ ಅನ್ನು ದಾಖಲಿಸಿಕೊಂಡ ನ್ಯಾಯಾಲಯ, ಬೆದರಿಕೆ ಹಾಕಿದವರ ವಿರುದ್ಧ ಏಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿತು.
ದ್ವೇಷ ಭಾಷಣ ಮತ್ತು ಹಿಂಸಾಚಾರದ ಬೆದರಿಕೆಗಳ ಕುರಿತು ಮಾರ್ಗಸೂಚಿಗಳನ್ನು ಕೋರಿ ನಿರ್ಮಾಪಕ ಮತ್ತು ಮೂರನೇ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ನಡೆಸಿದ ಪೀಠವು, ಭಾವನೆಗಳಿಗೆ ನೋವುಂಟು ಮಾಡುವ ಹೇಳಿಕೆ ಎಂದು ಅಭಿವ್ಯಕ್ತಿ ಸ್ವಾತಂತ್ರ‍್ಯವನ್ನು ಮೊಟಕುಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಸ್ಟ್ಯಾಂಡ್-ಅಪ್ ಕಾಮಿಕ್ಸ್ ಅನ್ನು ನಿಲ್ಲಿಸಬೇಕೇ? ಕವಿಗಳು ಕವಿತೆಗಳನ್ನು ಹೇಳಬಾರದೇ…? ಎಂದು ನ್ಯಾಯಾಲಯವು ಪ್ರಶ್ನಿಸಿತು. ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಕೆಲವು ಗುಂಪುಗಳು ಏನು ಬಿಡುಗಡೆ ಮಾಡಬಹುದು ಅಥವಾ ಬಿಡುಗಡೆ ಮಾಡಬಾರದು ಎಂದು ನಿರ್ದೇಶಿಸಲು ಅನುಮತಿಸಬಾರದು ಎಂದು ಒತ್ತಿ ಹೇಳಿತು.
