ಉದಯವಾಹಿನಿ, ಬೆಂಗಳೂರು: ಸಂವಿಧಾನ ಪೀಠಿಕೆಯಿಂದ ಜಾತ್ಯತೀತ, ಸಮಾಜವಾದ ಪದಗಳು ತೆಗೆಯುವ ಆರ್‌ಎಸ್‌ಎಸ್‌ನ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿಕೆ ಸಮಂಜಸವಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂವಿಧಾನ ರಚನೆ ಸಂದರ್ಭದಲ್ಲಿ ಬಾಬಾ ಅಂಬೇಡ್ಕರ್ ಇಡೀ ವಿಶ್ವದಲ್ಲಿ ಯಾವ ಯಾವ ರಾಷ್ಟ್ರದಲ್ಲಿ ಸಂವಿಧಾನದ ಇದೆ ಎಂದು ಅಧ್ಯಯನ ಮಾಡಿದ್ದರು. ಭಾರತದ ಪರಿಸ್ಥಿತಿ ಅರ್ಥ ಮಾಡಿಕೊಂಡು ಸಮಾಜದಲ್ಲಿ ಇರುವ ವಿವಿಧ ಪದರಗಳನ್ನು ಅರ್ಥ ಮಾಡಿಕೊಂಡು ಸಂವಿಧಾನ ಕೊಟ್ಟಿದ್ದರು. ಜಾತಿ, ಧರ್ಮ ಅರ್ಥ ಮಾಡಿಕೊಂಡು ಜಾತ್ಯತೀತ ಪದವನ್ನು ಬಳಸಿದ್ದಾರೆ. ಅಂದಿನಿಂದ ಇಲ್ಲಿಯವರೆಗೆ ನಾವು ಪಾಲನೆ ಮಾಡಿಕೊಳ್ಳುತ್ತಾ ಬಂದಿದ್ದೇವೆ. ಈಗ ಏಕಾಏಕಿ ಪದಗಳನ್ನು ತೆಗೆಯಬೇಕು ಎಂಬುದು ಸರಿ ಕಾಣಿಸಲ್ಲ. ಹಾಗಾಗಿ ಹೊಸಬಾಳೆ ಹೇಳಿರುವುದು ಪ್ರಸ್ತುತ ಸಂದರ್ಭದಲ್ಲಿ ಸಮಂಜಸ ಅಲ್ಲ ಎಂದರು.
ಈಗಾಗಲೇ ರಾಹುಲ್ ಗಾಂಧಿ ಹೇಳಿದ್ದಾರೆ. ತೊಂದರೆ ಇಲ್ಲದೆ ನಡೆದು ಬಂದಿದೆ, ಅದು ಹಾಗೇ ಇರಬೇಕು. ಹೊಸಬಾಳೆ ಯಾವ ಉದ್ದೇಶಕ್ಕಾಗಿ ಆ ಮಾತು, ಪದ ಬಳಸಿದ್ದಾರೆ ಗೊತ್ತಿಲ್ಲ. ಭಾರತದ ಸಂವಿಧಾನ ವಿಶ್ವದ ಗಮನ ಸೆಳೆದಿದೆ. ವಿವಿಧತೆಯಲ್ಲಿ ಏಕತೆಯಿದೆ. ಜಾತಿ, ಧರ್ಮ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವುದೇ ಸಂವಿಧಾನದ ಆಶಯ. ನಮ್ಮಲ್ಲಿ ಬೇರೆ ಬೇರೆ ಭಾಷೆ, ಸಂಸ್ಕೃತಿ, ಧರ್ಮ ಇದೆ. ಇದೆಲ್ಲವನ್ನು ಒಟ್ಟುಗೂಡಿ ನಮ್ಮನ್ನ ಬಾಂಧವ್ಯದಿಂದ ಇರುವಂತೆ ಮಾಡಿದೆ. ಇದರಲ್ಲಿ ಕಾಂಪ್ರಮೈಸ್ ಮಾಡುವುದರಲ್ಲಿ ಯಾವುದೇ ಅರ್ಥ ಇಲ್ಲ ಎಂದು ತಿಳಿಸಿದರು.
