ಉದಯವಾಹಿನಿ ಲಕ್ನೋ: ಮಹಿಳೆಯೊಬ್ಬಳು 18 ಎಕರೆ ಆಸ್ತಿಗಾಗಿ ವ್ಯಕ್ತಿಯೊಬ್ಬನನ್ನು ಮದುವೆಯಾಗಿ, ಕೆಲವೇ ದಿನಗಳಲ್ಲಿ ಆತನನ್ನು ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಹತ್ಯೆಯಾದ ವ್ಯಕ್ತಿಯನ್ನು ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯ ಪಡ್ವಾರ್ (ಖಿಟೋಲಾ) ಗ್ರಾಮದ ಇಂದ್ರಕುಮಾರ್ ತಿವಾರಿ (45) ಎಂದು ಗುರುತಿಸಲಾಗಿದೆ. ಹತ್ಯೆ ಆರೋಪಿಯನ್ನು ಸಾಹಿಬಾ ಬಾನೋ ಎಂದು ಗುರುತಿಸಲಾಗಿದೆ. ಇಂದ್ರಕುಮಾರ್ ತಿವಾರಿ, ಅರೆಕಾಲಿಕ ಶಿಕ್ಷಕ ಮತ್ತು ರೈತನಾಗಿದ್ದರು. ಕಳೆದ ತಿಂಗಳು ಪ್ರಸಿದ್ಧ ಗುರು ಅನಿರುದ್ಧಾಚಾರ್ಯ ಮಹಾರಾಜ್ ಅವರ ಆಧ್ಯಾತ್ಮಿಕ ಪ್ರವಚನದ ಸಂದರ್ಭದಲ್ಲಿ ವಧು ಸಿಗದ ಬಗ್ಗೆ ತಮ್ಮ ಹತಾಶೆಯನ್ನು ಅವರು ವ್ಯಕ್ತಪಡಿಸಿದ್ದರು. ಈ ವಿಡಿಯೋ ವೈರಲ್ ಆಗಿತ್ತು. ವೈರಲ್ ಆಗಿರುವ ವಿಡಿಯೋದಲ್ಲಿ ಇಂದ್ರಕುಮಾರ್, ಗುರು ಅನಿರುದ್ಧಾಚಾರ್ಯರಿಗೆ 18 ಎಕರೆ ಭೂಮಿ ಹೊಂದಿದ್ದೇನೆ. ಆದರೆ ತನ್ನ ಆಸ್ತಿಯನ್ನು ನೋಡಿಕೊಳ್ಳಲು ಯಾರೂ ಇಲ್ಲ ಎಂದು ಹೇಳಿದ್ದರು.
ಈ ವಿಡಿಯೋ ಗಮನಿಸಿದ ಸಾಹಿಬಾ ಬಾನೋ ಹಾಗೂ ಅವಳ ಸಹಚರರು ಆಸ್ತಿಗಾಗಿ ಸಂಚು ರೂಪಿಸಿದ್ದರು. ಸಾಹಿಬಾ ನಕಲಿ ಆದಾರ್ ಕಾರ್ಡ್ ಮಾಡಿಸಿ, ಕುಶಿ ತಿವಾರಿ ಎಂದು ಹೆಸರು ಬದಲಿಸಿಕೊಂಡು, ಸಾಮಾಜಿಕ ಜಾಲತಾಣದ ಮೂಲಕ ಇಂದ್ರಕುಮಾರ್ ಅವರನ್ನು ಸಂಪರ್ಕಿಸಿದ್ದಳು. ಬಳಿಕ ಅವರನ್ನು ಉತ್ತರ ಪ್ರದೇಶದ ಗೋರಖ್‌ಪುರಕ್ಕೆ ಕರೆಸಿ, ಮದುವೆ ಪ್ರಸ್ತಾಪ ಮಾಡಿದ್ದಳು. ಈ ವೇಳೆ ಇಂದ್ರಕುಮಾರ್ ಮದುವೆಗೆ ಒಪ್ಪಿಕೊಂಡರು. ಈ ವಿಚಾರವನ್ನು ಕುಟುಂಬಕ್ಕೂ ತಿಳಿಸಿದ್ದರು.
