ಉದಯವಾಹಿನಿ, ಟೆಹ್ರಾನ್: ಇರಾನ್ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್ ದಾಳಿಯಿಂದ ಕೋಪಗೊಂಡಿರುವ ಇರಾನ್ ಧರ್ಮಗುರು ನಾಸೆರ್ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಫತ್ವಾ ಹೊರಡಿಸಿದ್ದಾರೆ. ನ್ಯೂಯಾರ್ಕ್ ಸನ್ ವರದಿಯ ಪ್ರಕಾರ, ಶಿಯಾ ಧರ್ಮಗುರು ನಾಸೆರ್ ಮಕರಿಮ್ ಶಿರಾಜಿ ಅವರು ಪ್ರಪಂಚದಾದ್ಯಂತದ ಇರುವ ಮುಸ್ಲಿಮರು ಒಂದಾಗುವಂತೆ ಕರೆ ನೀಢೀ ಫತ್ವಾ ಹೊರಡಿಸಿದ್ದಾರೆ.
ಜಾಗತಿಕ ಇಸ್ಲಾಮಿಕ್ ಸಮುದಾಯದ ನಾಯಕತ್ವಕ್ಕೆ ಬೆದರಿಕೆ ಒಡ್ಡುವ ಯಾವುದೇ ವ್ಯಕ್ತಿ ಅಥವಾ ಸರ್ಕಾರಕ್ಕೆ ಸೂಕ್ತ ಉತ್ತರ ನೀಡಲಾಗುವುದು ಎಂದು ಈ ಫತ್ವಾ ಹೇಳುತ್ತದೆ. ಇರಾನ್‌ನ ಸರ್ವೋಚ್ಚ ನಾಯಕನನ್ನು ಬೆದರಿಸುವ ಅಥವಾ ಹತ್ಯೆ ಮಾಡಲು ಪ್ರಯತ್ನಿಸುವವರು ಅಲ್ಲಾಹನ ಕೋಪಕ್ಕೆ ಗುರಿಯಾಗುತ್ತಾರೆ. ಅಂತಹ ಕೃತ್ಯವನ್ನು ಅಲ್ಲಾಹನಿಗೆ ಮಾಡಿದ ಅವಮಾನವೆಂದು ಪರಿಗಣಿಸಲಾಗುತ್ತದೆ ಮತ್ತು ಅಲ್ಲಾಹನ ವಿರುದ್ಧದ ಯುದ್ಧವೆಂದು ಪರಿಗಣಿಸಲಾಗುತ್ತದೆ ಎಂದು ಫತ್ವಾದಲ್ಲಿ ಹೇಳಲಾಗಿದೆ.
ಇತ್ತೀಚಿನ ದಿನಗಳಲ್ಲಿ, ಅಮೆರಿಕ ಅಧ್ಯಕ್ಷ ಮತ್ತು ಇಸ್ರೇಲಿ ನಾಯಕರು ಇರಾನ್‌ನ ಸರ್ವೋಚ್ಚ ನಾಯಕನಿಗೆ ಪದೇ ಪದೇ ಬೆದರಿಕೆ ಹಾಕುತ್ತಿದ್ದಾರೆ. ಇರಾನ್‌ನ ಸರ್ವೋಚ್ಚ ನಾಯಕ ಅಥವಾ ಧಾರ್ಮಿಕ ನಾಯಕರನ್ನು ಹತ್ಯೆ ಮಾಡಲು ಯೋಜಿಸುವ ಯಾರಾದರೂ ಇಸ್ಲಾಮಿಕ್ ಕಾನೂನಿನಡಿಯಲ್ಲಿ ಅತ್ಯಂತ ಕಠಿಣ ಶಿಕ್ಷೆಗೆ ಅರ್ಹರಾಗಿರುತ್ತಾರೆ ಎಂದು ಫತ್ವಾದಲ್ಲಿ ತಿಳಿಸಲಾಗಿದೆ. ಪ್ರಪಂಚದಾದ್ಯಂತದ ಎಲ್ಲಾ ಮುಸ್ಲಿಮರು ಈ ಶತ್ರುಗಳನ್ನು ಗುರುತಿಸಿ ಸೇಡು ತೀರಿಸಿಕೊಳ್ಳುವುದು ಮುಖ್ಯ. ಅಲ್ಲಾಹನು ಸರ್ವೋಚ್ಚ ನಾಯಕನನ್ನು ರಕ್ಷಿಸಲಿ. ಅಲ್ಲಾಹುವಿನ ಆಶೀರ್ವಾದ ಆತನ ಮೇಲೆ ಇರಲಿ. ಇಸ್ಲಾಮಿಕ್ ಏಕತೆಗೆ ಬೆದರಿಕೆ ಒಡ್ಡುವ ಯಾರನ್ನಾದರೂ ಅಲ್ಲಾಹನ ವಿರುದ್ಧ ಬಂಡಾಯವೆದ್ದವರೆಂದು ಪರಿಗಣಿಸಲಾಗುತ್ತದೆ ಎಂದು ಫತ್ವಾದಲ್ಲಿ ತಿಳಿಸಲಾಗಿದೆ.
