ಉದಯವಾಹಿನಿ, ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಕಾಶ್ಮೀರದಲ್ಲಿ ಪ್ರವಾಸೋದ್ಯಮವನ್ನು ನಾಶ ಮಾಡಲು ಉದ್ದೇಶಿಸಲಾದ “ಆರ್ಥಿಕ ಯುದ್ಧದ ಕೃತ್ಯ” ಎಂದು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಟೀಕಿಸಿದ್ದಾರೆ. ಪಾಕಿಸ್ತಾನದ ಜೊತೆಗಿನ ಕದನ ವಿರಾಮ ಒಪ್ಪಂದಕ್ಕೂ ಮೊದಲು ನವದೆಹಲಿ ಮತ್ತು ವಾಷಿಂಗ್ಟನ್ ನಡುವಿನ ಮಾತುಕತೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ಹಂಚಿಕೊಂಡ ಅವರು, ಪಾಕಿಸ್ತಾನದ ಬೆಂಬಲವಿರುವ ಭಯೋತ್ಪಾದನೆಗೆ ಪ್ರತಿಕ್ರಿಯಿಸದಂತೆ ತಡೆಯಲು ಪರಮಾಣು ಬ್ಲ್ಯಾಕ್‌ಮೇಲ್‌ಗೆ ಅವಕಾಶ ನೀಡುವುದಿಲ್ಲ ಎಂಬ ಭಾರತದ ನಿಲುವನ್ನು ಪ್ರತಿಪಾದಿಸಿದರು. ಭಾರತ ಮತ್ತು ಪಾಕಿಸ್ತಾನವನ್ನು ಕದನ ವಿರಾಮಕ್ಕೆ ಒಪ್ಪಿಕೊಳ್ಳುವಂತೆ ಒತ್ತಾಯಿಸಲು ವ್ಯಾಪಾರ ಒಪ್ಪಂದವನ್ನು ಬಳಸಿಕೊಂಡಿದ್ದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳನ್ನು ತಳ್ಳಿಹಾಕಿದರು.
ನ್ಯೂಯಾರ್ಕ್‌ನಲ್ಲಿ ನ್ಯೂಸ್‌ವೀಕ್‌ನೊಂದಿಗೆ ವಿಶೇಷ ಚಾಟ್‌ನಲ್ಲಿ ಭಾಗವಹಿಸಿದ ಎಸ್. ಜೈಶಂಕರ್, ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರೊಂದಿಗೆ ಫೋನ್ ಮೂಲಕ ಮಾತನಾಡಿದಾಗ ನಾನು ಕೂಡ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಅದೇ ರೂಂನಲ್ಲಿ ಇದ್ದೆ ಎಂದು ಬಹಿರಂಗಪಡಿಸಿದ್ದಾರೆ. ಭಾರತಕ್ಕೆ ಸಂಬಂಧಿಸಿದಂತೆ ವ್ಯಾಪಾರ ಮತ್ತು ಕದನ ವಿರಾಮದ ನಡುವೆ ಯಾವುದೇ ಸಂಬಂಧವಿಲ್ಲ. ಕದನವಿರಾಮ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ದ್ವಿಪಕ್ಷೀಯ ಒಪ್ಪಂದವಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.ಮೇ 9ರ ರಾತ್ರಿ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಪ್ರಧಾನಿ ಮೋದಿಯವರೊಂದಿಗೆ ಫೋನ್ನಲ್ಲಿ ಮಾತನಾಡಿದರು. ಪಾಕಿಸ್ತಾನಿಗಳು ಭಾರತದ ಮೇಲೆ ಭಾರಿ ದಾಳಿ ನಡೆಸಲಿದ್ದಾರೆ ಎಂದು ಅವರು ಹೇಳಿದಾಗ ನಾನು ಅದೇ ರೂಂನಲ್ಲಿದ್ದೆ. ನಾವು ಅವರು ಹೇಳಿದ ಕೆಲವು ವಿಷಯಗಳನ್ನು ಸ್ವೀಕರಿಸಲಿಲ್ಲ. ಪಾಕಿಸ್ತಾನ ನಮ್ಮ ದೇಶದ ಮೇಲೆ ಏನೇ ಮಾಡಿದರೂ ನಾವು ಅದಕ್ಕೆ ಪ್ರತಿಕ್ರಿಯೆ ನೀಡಲು ಸಿದ್ಧರಿದ್ದೇವೆ ಎಂದು ಮೋದಿ ಸೂಚಿಸಿದರು” ಎಂದು ಜೈಶಂಕರ್ ಹೇಳಿದ್ದಾರೆ.
