ಉದಯವಾಹಿನಿ, ಸೈದಾಪುರ: ಪಟ್ಟಣದ ಕೇಂದ್ರ ಬಸ್‌ನಿಲ್ದಾಣದ ಮುಂಭಾಗದಲ್ಲಿರುವ ಎಲಿಗೇರಾ-ಮುಧೋಳ ರಾಜ್ಯ ಹೆದ್ದಾರಿಯ ಸಿ.ಸಿ ರಸ್ತೆ ಹದಗೆಟ್ಟು ಮಳೆಗಾಲದಲ್ಲಿ ಪ್ರಯಾಣಿಕರ ಮತ್ತು ಸಾರ್ವಜನಿಕರ ಸಂಚಾರ ದುಸ್ತರವಾಗಿದೆ.ದಿನದಿಂದ ದಿನಕ್ಕೆ ಪಟ್ಟಣವು ಕೈಗಾರಿಕ, ಶೈಕ್ಷಣಿಕ ಮತ್ತು ವ್ಯಾಪಾರ-ವ್ಯವಹಾರದ ಕೇಂದ್ರ ಬಿಂದುವಾಗಿ ಬೆಳೆಯುತ್ತಿದೆ.
ಸುಮಾರು 30ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕೊಂಡಿಯಾಗಿದೆ. ನಿತ್ಯ ಸುತ್ತಮುತ್ತಲಿನ ಈ ಗ್ರಾಮಗಳಿಂದ ವಿದ್ಯಾಭ್ಯಾಸಕ್ಕಾಗಿ ಶಾಲಾ-ಕಾಲೇಜಿಗೆ ಸಾವಿರಾರು ವಿದ್ಯಾರ್ಥಿಗಳು, ಕೃಷಿ ಸಾಮಗ್ರಿಗಳ ಖರೀದಿಗಾಗಿ ರೈತರು, ಕೂಲಿ ಕೆಲಸಕ್ಕಾಗಿ ಕಾರ್ಮಿಕರು, ವೈದ್ಯಕೀಯ ಚಿಕಿತ್ಸೆಗಾಗಿ ರೋಗಿಗಳು, ನೌಕರಸ್ಥರು ಸೇರಿದಂತೆ ದಿನಾಲು ಸಾವಿರಾರು ಜನರು ಪಟ್ಟಣಕ್ಕೆ ಬಂದು ಹೋಗುತ್ತಾರೆ.
ಕೇಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ರಾಜ್ಯ ಹೆದ್ದಾರಿಯು ಮಳೆಗಾಲದಲ್ಲಿ ಮಳೆ ನೀರು ಸಂಗ್ರಹಗೊಂಡು ಕೆರೆಯಂತಾಗುತ್ತಿದೆ. ಕಳೆದ ಎರಡು-ಮೂರು ವರ್ಷಗಳಿಂದ ಈ ಸಮಸ್ಯೆ ಉಲ್ಬಣಗೊಂಡು ಮಳೆ ನೀರಿನಲ್ಲಿಯೇ ಪಾದಚಾರಿಗಳು, ದ್ವಿ ಚಕ್ರ ತ್ರಿಚಕ್ರ, ವಾಹನ ಸವಾರರು, ವಿದ್ಯಾರ್ಥಿಗಳು, ವಯೋವೃದ್ಧರು ಸಂಚಾರಕ್ಕೆ ಪರದಾಡುವಂತಾಗಿದೆ.
ಅಷ್ಟೇ ಅಲ್ಲದೆ ನೆರೆಯ ಆಂಧ್ರ, ತೆಲಂಗಾಣದಿಂದ ನಿತ್ಯ ಸಾವಿರಾರು ಜನರು ದೈನಂದಿನ ವ್ಯವಹಾರಕ್ಕಾಗಿ ಪಟ್ಟಣಕ್ಕೆ ಆಗಮಿಸುತ್ತಾರೆ. ಆದರೆ ಮಳೆ ಬಂದರೆ ಸಾಕು ಇವರೆಲ್ಲರಿಗೂ ಕಾಡುವ ಸಮಸ್ಯೆ ಕೆರೆಯಂತಾದ ರಸ್ತೆಯ ನೀರಿನಲ್ಲಿರುವ ಕಾಣದ ಗುಂಡಿಗಳ ಮಧ್ಯೆ ಸಂಚರಿಸುವುದು. ಆಯಾ ತಪ್ಪಿದರೂ ಕೂಡ ನೀರಿನಲ್ಲಿಯೇ ಬೀಳುವಂತಹ ಸ್ಥಿತಿ ನಿರ್ಮಾಣವಾಗಿದೆ.
