ಉದಯವಾಹಿನಿ, ಬೆಂಗಳೂರು: ವಿಜಯಪುರ ಜಿಲ್ಲೆಯ ಬಬಲೇಶ್ವರ ಮತ್ತು ತಿಕೋಟಾ, ಬಾಗಲಕೋಟೆ ಜಿಲ್ಲೆಯ ಜಮಖಂಡಿ ಮತ್ತು ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನಲ್ಲಿ ನೀರಾವರಿ ಮತ್ತು ಕುಡಿಯುವ ನೀರು ಪೂರೈಸುವ ತುಬುಚಿ – ಬಬಲೇಶ್ವರ ಏತ ನೀರಾವರಿ ಯೋಜನೆಯಡಿಯಲ್ಲಿ ಬಾಬಾನಗರದ ಬಳಿ ಹೊಸದಾಗಿ ಕೆರೆ ನಿರ್ಮಿಸಲು 550 ಕೋಟಿ ರೂ. ಅನುದಾನ ಒದಗಿಸಬೇಕೆಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಅವರು ಜಲಸಂಪನ್ಮೂಲ ಸಚಿವ‌ ಡಿ.ಕೆ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಸದಾಶಿವನಗರದ ನಿವಾಸದಲ್ಲಿ ಡಿಸಿಎಂ ಅವರನ್ನು ಗುರುವಾರ ಅವರು ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ತುಬುಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯಲ್ಲಿ 6.3 ಟಿಎಂಸಿ ನೀರನ್ನು ಮೇಲ್ಕಂಡ ತಾಲ್ಲೂಕುಗಳ 1.30 ಲಕ್ಷ ಎಕರೆಗೆ ಹರಿಸಲಾಗುತ್ತಿದೆ. ಇಲ್ಲಿ 60%ರಷ್ಟು ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ಬೇಸಿಗೆಯಲ್ಲಿ ನೀರಿನ ಕೊರತೆ ಎದುರಾಗುತ್ತಿದೆ. ಇದನ್ನು ಬಗೆಹರಿಸಲು ಬಾಬಾನಗರದ ಸಮೀಪ ಕೆರೆ ಕಟ್ಟಿ, 0.775 ಟಿಎಂಸಿ ನೀರನ್ನು ತುಂಬಲು ಅವಕಾಶವಿದೆ. ಇಲ್ಲಿ 679.25 ಎಕರೆ ಸರ್ಕಾರಿ ಜಮೀನಿದ್ದು, ಈ ಪೈಕಿ 434 ಎಕರೆಯಲ್ಲಿ ಕೆರೆ ಕಟ್ಟಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ ಎಂದು ವಿವರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!