ಉದಯವಾಹಿನಿ, ಬೆಂಗಳೂರು: ಕೇಂದ್ರ ವಿಶ್ವವಿದ್ಯಾಲಯಕ್ಕೆ ಮಾಜಿ ಪ್ರಧಾನಿ ದಿ. ಮನಮೋಹನ್ ಸಿಂಗ್ ಹೆಸರು ಇಡಲು ಮುಂದಾಗಿರುವ ರಾಜ್ಯ ಸರ್ಕಾರದ ನಡೆಯನ್ನ ಜೆಡಿಎಸ್ ಖಂಡಿಸಿದೆ. ಈ ಕುರಿತು ಎಕ್ಸ್‌ನಲ್ಲಿ (X) ಸರ್ಕಾರದ ನಡೆಗೆ ವಿರೋಧ ವ್ಯಕ್ತಪಡಿಸಿರುವ ಜೆಡಿಎಸ್, ಕಾಂಗ್ರೆಸ್ ಕನ್ನಡಿಗರಿಗೆ ಮಹಾದ್ರೋಹ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದೆ. ಎಕ್ಸ್‌ನಲ್ಲಿ ಏನಿದೆ?ರಾಜ್ಯದಲ್ಲಿ ಗುಲಾಮಿ ಕಾಂಗ್ರೆಸ್ ಸರ್ಕಾರದ ತೊಘಲಕ್ ಆಡಳಿತ ಹೇಗಿದೆ ನೋಡಿ ಕರ್ನಾಟಕದ ಮಹಾಜನತೆ. ರಾಮನ ಹೆಸರಿನ “ರಾಮನಗರ” (Ramanagar) ಜಿಲ್ಲೆಯನ್ನು “ಬೆಂಗಳೂರು ದಕ್ಷಿಣ” (Bengaluru South) ಎಂದು ವಿರೋಧವನ್ನು ಲೆಕ್ಕಿಸದೇ ಮರುನಾಮಕರಣ ಮಾಡಲಾಗಿದೆ. “ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ”ಕ್ಕೆ ಮಾಜಿ ಪಿಎಂ “ಮನಮೋಹನ್ ಸಿಂಗ್ ವಿವಿ ಬೆಂಗಳೂರು” ಎಂದು ಹೆಸರಿಡಲು ಈಗ ಕಾಂಗ್ರೆಸ್ ಸರ್ಕಾರ ತೀರ್ಮಾನಿಸಿದೆ. ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರದ ವಿಶ್ವಮಟ್ಟದಲ್ಲಿ ಬ್ರ‍್ಯಾಂಡ್ ಆಗಿದೆ. “ಬೆಂಗಳೂರು” ಹೆಸರನ್ನೇ ವಿಶ್ವವಿದ್ಯಾಲಯಕ್ಕೂ ಇಡಲಾಗಿತ್ತು. ಪರ್ಯಾಯಾವಾಗಿ ಮರುನಾಮಕರಣ ಮಾಡುವ ಅವಶ್ಯಕತೆ, ಜರೂರು ಏನಿತ್ತು? ಅಧಿಕಾರದ ಮದ, ದರ್ಪ, ದುರಹಂಕಾರದಲ್ಲಿ ಮೆರೆಯುತ್ತಿರುವ ಸಿದ್ದರಾಮಯ್ಯ ಹಾಗೂ ಡಿಕೆಶಿವಕುಮಾರ್ ಹೈಕಮಾಂಡ್ ಮೆಚ್ಚಿಸಲು ಬೆಂಗಳೂರಿನ ಘನತೆ, ಗೌರವಕ್ಕೆ ಹಾಗೂ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವ ಕೆಲಸವನ್ನು ವಿರೋಧದ ನಡುವೆಯೂ ಮಾಡುತ್ತಿರುವುದು ಅಕ್ಷಮ್ಯ ಎಂದು ಆಕ್ರೋಶ ಹೊರಹಾಕಿದೆ.

Leave a Reply

Your email address will not be published. Required fields are marked *

error: Content is protected !!