ಉದಯವಾಹಿನಿ, ನವದೆಹಲಿ: ದೇಶದಲ್ಲಿ ದ್ವಿಚಕ್ರ ವಾಹನ ಸವಾರರ ಸುರಕ್ಷತೆಗೆ ಮುಂದಾಗಿರುವ ಕೇಂದ್ರ ಸರ್ಕಾರ ಕಳಪೆ ಗುಣಮಟ್ಟದ ಹೆಲ್ಮೆಟ್ ಮಾರಾಟ ಮತ್ತು ಬಳಕೆಗೆ ತಡೆಯೊಡ್ಡಿದೆ. ಕಳಪೆ ಗುಣಮಟ್ಟದ ಹೆಲ್ಮೆಟ್ ತಯಾರಕರು ಮತ್ತು ಮಾರಾಟಗಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ, ರಸ್ತೆ ಬದಿಗಳಲ್ಲಿ ಮಾರಾಟ ಆಗುತ್ತಿರುವ ಕಳಪೆ ಹೆಲ್ಮೆಟ್‌ಗಳಿಗೆ ಬ್ರೇಕ್ ಹಾಕುವ ಜೊತೆಗೆ ವಾಹನ ಸವಾರರಿಗೆ BIS ಪ್ರಮಾಣೀಕರಿಸಿದ ISI ಗುರುತುಳ್ಳ ಹೆಲ್ಮೆಟ್ ಬಳಕೆಯನ್ನೇ ಕಡ್ಡಾಯಗೊಳಿಸಿದೆ.
ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ನೇತೃತ್ವದಲ್ಲಿ ಭಾರತೀಯ ಮಾನದಂಡಗಳ ಬ್ಯೂರೋ (BIS) ಕಳಪೆ ಹೆಲ್ಮೆಟ್ ತಯಾರಕರು ಮತ್ತು ಮಾರಾಟಗಾರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದು, ದೆಹಲಿಯಲ್ಲಿ ಈಗಾಗಲೇ 2500ಕ್ಕೂ ಹೆಚ್ಚು ಕಳಪೆ ಹೆಲ್ಮೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. 2024-25ನೇ ಆರ್ಥಿಕ ವರ್ಷದಲ್ಲಿ BIS ದೆಹಲಿಯಲ್ಲಿ 30ಕ್ಕೂ ಹೆಚ್ಚು ಹೆಲ್ಮೆಟ್ ತಯಾರಕ ಘಟಕಗಳ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಪರವಾನಗಿ ರದ್ದಾದ ಹಾಗೂ ಅವಧಿ ಮುಗಿದ 9 ತಯಾರಕರು ಕಂಡುಬಂದಿದ್ದು, ಇವರಿಂದ 2,500ಕ್ಕೂ ಹೆಚ್ಚು ಹೆಲ್ಮೆಟ್‌ಗಳನ್ನು ವಶಪಡಿಸಿಕೊಂಡಿದೆ.
