ಉದಯವಾಹಿನಿ, ಯಾದಗಿರಿ: ಕಲುಷಿತ ನೀರು ಸೇವಿಸಿ ಒಂದೇ ಗ್ರಾಮದ ಮೂವರು ಮೃತಪಟ್ಟಿದ್ದು, ಹಲವರು ಅಸ್ವಸ್ಥಗೊಂಡಿರುವ ಘಟನೆ ಜಿಲ್ಲೆಯ ಸುರಪುರ ತಾಲ್ಲೂಕಿನ ತಿಪ್ಪನಟಗಿ ಗ್ರಾಮದಲ್ಲಿ ನಡೆದಿದೆ. ಕಳೆದ 10 ದಿನಗಳ ಹಿಂದೆ ಗ್ರಾಮಕ್ಕೆ ಕಲುಷಿತ ನೀರು ಪೂರೈಕೆಯಾಗಿದ್ದು, ಇದರಿಂದ ಹಲವಾರು ಮಂದಿಗೆ ವಾಂತಿ, ಭೇದಿ ಕಾಣಿಸಿಕೊಂಡಿದೆ. ತಕ್ಷಣ ಕೆಲವರು ಖಾಸಗಿ ಆಸ್ಪತ್ರೆಗೆ ದಾಖಲಾದರೆ ಇನ್ನೂ ಕೆಲವರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಪೈಕಿ ಪ್ರಸ್ತುತ ದೇವಿಕಮ ಹೊಟ್ಟಿ (48), ವೆಂಕಮ (40) ಹಾಗೂ ರಾಮಣ್ಣ ಪೂಜಾರಿ (50) ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂಲಗಳ ಪ್ರಕಾರ ಈ ಪೈಕಿ 6 ಮಂದಿಯ ಸ್ಥಿತಿ ಗಂಭೀರವಾಗಿದೆ. ಸುದ್ದಿ ತಿಳಿದು ಗ್ರಾಮಕ್ಕೆ ತಾಲೂಕು ಆರೋಗ್ಯಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವೈದ್ಯರ ತಂಡ ಕೂಡ ಆಗಮಿಸಿದೆ. ಗ್ರಾಮದ ಮೂವರು ಮೃತಪಟ್ಟಿರುವುದನ್ನು ಕಂಡು ಆತಂಕದ ವಾತಾವರಣ ಸೃಷ್ಠಿಯಾಗಿದ್ದು, ಜಿಲ್ಲಾ ಆರೋಗ್ಯಾಧಿಕಾರಿ ಮಹೇಶ ಬಿರಾದಾರ ಅವರು ಘಟನೆ ಕುರಿತಂತೆ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.
ಶಾಸಕರು ಸೇರಿದಂತೆ ಹಲವು ಜನಪ್ರತಿನಿಧಿಗಳು ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಕೆಲವರು ಘಟನೆಯಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಂಬಾವಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ನೀರು ಕಲುಷಿತವಾಗಲು ಕಾರಣವೇನು, ನೀರನ್ನು ಪೂರೈಸಿದ್ದು ಯಾರು, ಮತ್ತು ವಾಟರ್ ಟ್ಯಾಂಕ್‌ನ್ನು ಶುಚಿಗೊಳಿಸಲಾಗಿದೆಯೇ ಎಂಬುವುದರ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.
