ಉದಯವಾಹಿನಿ, ಬೆಂಗಳೂರು: ಹಠಾತ್‌ ಸಾವಿಗೆ ಕಾರಣವಾಗುವ ಹೃದ್ರೋಗವನ್ನು ಅಧಿಸೂಚಿತ ಕಾಯಿಲೆ ಎಂದು ರಾಜ್ಯ ಸರ್ಕಾರ ಘೋಷಿಸುತ್ತಿದ್ದು, ಹೃದಯ ಸಂಬಂಧದ ಕಾಯಿಲೆಗಳನ್ನು ತಪ್ಪಿಸಲು ಶಾಲೆಗಳಲ್ಲಿ ,ಸರ್ಕಾರಿ ನೌಕರರು, ಗುತ್ತಿಗೆ ನೌಕರರಿಗೆ ವಾರ್ಷಿಕ ನಿಯಮಿತ ತಪಾಸಣೆಗೆ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.
ಹೃದ್ರೋಗಗಳಿಂದ ಸಂಭವಿಸುತ್ತಿರುವ ಹಠಾತ್‌ ಸಾವುಗಳ ಬಗ್ಗೆ ಅಧ್ಯಯನಕ್ಕಾಗಿ ರಚಿಸಲಾಗಿದ್ದ ತಜ್ಞರ ಸಮಿತಿ ವರದಿಯನ್ನು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಹೃದಯಾಘಾತಗಳಿಗೆ ಜನರ ಜೀವನಶೈಲಿ ಕಾರಣವಾಗಿದೆ. ಕೋವಿಡ್‌ ಲಸಿಕೆಯೇ ಹೃದಯಾಘಾತಕ್ಕೆ ಕಾರಣ ಎಂದು ಎಲ್ಲಿಯೂ ತಿಳಿದುಬಂದಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಬಗ್ಗೆ ಅಧ್ಯಯನ ನಡೆದಿದೆ. ಲಸಿಕೆಯಿಂದ ಜನರಿಗೆ ಒಳ್ಳೆಯದಾಗಿದೆ. ಬಹಳಷ್ಟು ಜನರ ಜೀವ ಉಳಿದಿದೆ ಎಂದು ಸ್ಪಷ್ಟಪಡಿಸಿದರು.
ಕೋವಿಡ್‌ ನಿಯಂತ್ರಣಕ್ಕೆ ನೀಡಲಾದ ಎಂಆರ್‌ಎನ್‌ಎ ಲಸಿಕೆಯ ಬಗ್ಗೆ ಒಂದಿಷ್ಟು ಅನುಮಾನಗಳಿವೆ. ಆದರೆ ಅದನ್ನು ನಮ ದೇಶದಲ್ಲಿ ನೀಡಲಾಗಿಲ್ಲ ಎಂದರು.

ಜನಸಾಮಾನ್ಯರಲ್ಲಿದ್ದ ಅನುಮಾನವನ್ನು ಬಗೆಹರಿಸುವ ಸಲುವಾಗಿಯೇ ಮುಖ್ಯಮಂತ್ರಿಯವರು ತಂತ್ರಜ್ಞರ ಸಮಿತಿಯನ್ನು ರಚಿಸಿದ್ದರು. ಅಧ್ಯಯನ ನಡೆಸಿದ ಸಮಿತಿಯು ಲಸಿಕೆಯ ಕಾರಣದಿಂದ ಹೃದಯಾಘಾತವಾಗಿಲ್ಲ ಎಂದು ಸ್ಪಷ್ಟಪಡಿಸಿದೆ ಎಂದು ಹೇಳಿದರು. ಚಿಕ್ಕವಯಸ್ಸಿನವರಲ್ಲಿ ದಿಢೀರ್‌ ಹೃದಯಾಘಾತವಾಗುತ್ತಿವೆ. ನಡೆದು ಹೋಗುವಾಗ, ವ್ಯಾಯಾಮ ಮಾಡುವಾಗ ಹಠಾತ್‌ ಮರಣಗಳಾಗುತ್ತಿವೆ. ಅವುಗಳ ಬಗ್ಗೆ ಹೆಚ್ಚಿನ ಗಮನ ಕೊಡಬೇಕು ಎಂದು ತಜ್ಞರ ಸಮಿತಿ ಹೇಳಿದೆ. ಸಮಿತಿಯ ಶಿಫಾರಸು ಆಧಾರದ ಮೇಲೆ ಸರ್ಕಾರ ಕೆಲ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದರು.

Leave a Reply

Your email address will not be published. Required fields are marked *

error: Content is protected !!