ಉದಯವಾಹಿನಿ, ಬೆಂಗಳೂರು: ಮಲೆ ಮಹದೇಶ್ವರ ಬೆಟ್ಟದ ವನ್ಯಜೀವಿಧಾಮದಲ್ಲಿ ಹುಲಿಗಳ ಸಂತತಿ ಹೆಚ್ಚಳವಾಗುತ್ತಿದ್ದು, ಈ ಅರಣ್ಯ ಪ್ರದೇಶವನ್ನು ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಿಸಲು ಸ್ಥಳೀಯರ ಅಭಿಪ್ರಾಯ ಸಂಗ್ರಹಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ.ವಿಕಾಸಸೌಧದ ತಮ್ಮ ಕಚೇರಿಯಲ್ಲಿಂದು ಅರಣ್ಯ ಪಡೆ ಮುಖ್ಯಸ್ಥರು, ಮುಖ್ಯ ವನ್ಯಜೀವಿ ಪರಿಪಾಲಕರು ಸೇರಿದಂತೆ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಮಲೆ ಮಹಾದೇಶ್ವರ ಬೆಟ್ಟವನ್ನು ಹುಲಿ ಸಂರಕ್ಷಿತ ಪ್ರದೇಶ ಘೋಷಣೆ ಮಾಡಲು ಕ್ರಮ ವಹಿಸುವಂತೆ ಹಾಗೂ ಎಲ್ಲ ಬಾಧ್ಯಸ್ಥರ ಸಭೆ ಕರೆದು ಚರ್ಚಿಸಿ, ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದ್ದಾರೆ.
ರಾಜ್ಯದಲ್ಲಿ ವನ್ಯಜೀವಿಗಳ ಅಸಹಜ ಸಾವನ್ನು ನಿಯಂತ್ರಿಸಲು ಮತ್ತು ವನ್ಯ ಮೃಗಗಳ ದಾಳಿಯಿಂದ ಅಮೂಲ್ಯ ಜೀವಹಾನಿ ಆಗುವುದನ್ನು ತಡೆಯಲು ಎಲ್ಲ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ, ಆಯಾ ವಲಯದಲ್ಲಿ ಅಧಿಕಾರಿ, ಸಿಬ್ಬಂದಿಗೆ ಹೊಣೆಗಾರಿಕೆ ನಿಗದಿಪಡಿಸುವಂತೆ ನಿರ್ದೇಶನ ನೀಡಿದ್ದಾರೆ.

ಕೇಂದ್ರೀಕೃತ ಕಮಾಂಡ್ ಸೆಂಟರ್: ರಾಜ್ಯದಲ್ಲಿ ಸುಮಾರು 40 ಸಾವಿರ ಚದರ ಕಿ.ಮೀ. ಅರಣ್ಯ ಪ್ರದೇಶವಿದ್ದು, ಇದನ್ನು ಭೌತಿಕವಾಗಿ ಕಾವಲು ಕಾಯುವುದು ಕಷ್ಟಸಾಧ್ಯ. ಈ ನಿಟ್ಟಿನಲ್ಲಿ ವನ್ಯಜೀವಿಗಳ ಕಳ್ಳಬೇಟೆ ಮತ್ತು ಅರಣ್ಯ ಒತ್ತುವರಿ, ಮರಗಳ ಅಕ್ರಮ ಕಡಿತ ಆಗದಂತೆ ನಿಗ್ರಹಿಸಲು ಕೃತಕ ಬುದ್ಧಿಮತ್ತೆ, ಡ್ರೋನ್ ಕ್ಯಾಮೆರಾ, ಕಾಡಿನಂಚಿನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ, ಎಲ್ಲ ಕ್ಯಾಮೆರಾಗಳ ದೃಶ್ಯಗಳ ಆಧಾರದಲ್ಲಿ ವನ್ಯಮೃಗ ಮತ್ತು ಕಳ್ಳಬೇಟೆಗಾರರ ಚಲನವಲನದ ಬಗ್ಗೆ ನಿಗಾ ಇಡಲು ಕೇಂದ್ರೀಕೃತ ಕಮಾಂಡ್ ಸೆಂಟರ್ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!