ಉದಯವಾಹಿನಿ, ಬೆಂಗಳೂರು: ಬಿಜೆಪಿಯಲ್ಲಿ ಪ್ರತಿಷ್ಠೆ ಸಮರ, ನಾನಾ? ನೀನಾ…? ಕದನ ಸದ್ಯಕ್ಕೆ ಶಮನವಾಗುವುದು ಅನುಮಾನ. ಸದ್ಯ ರಾಜ್ಯ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆ ಜಟಾಪಟಿ ನಡೆಯುತ್ತಿದೆ. ವಿಜಯೇಂದ್ರ ವಿರುದ್ಧ ತೊಡೆ ತಟ್ಟಿರುವ ಭಿನ್ನರು ಮತ್ತು ತಟಸ್ಥರು, ಈಗಾಗಲೇ ದೆಹಲಿಗೆ ಹೋಗಿ ವರಿಷ್ಠರಿಗೆ ದೂರು/ಮನವಿ ಸಲ್ಲಿಸಿದ್ದಾರೆ. ವಿಜಯೇಂದ್ರ ಬದಲಾವಣೆಗೆ ವಿರೋಧಿ ಬಣ ಪಟ್ಟು ಹಿಡಿದಿದೆ. ಇದೀಗ ಎಲ್ಲರ ದೆಹಲಿ ಪರೇಡ್ ಬಳಿಕ ಕ್ಲೈಮ್ಯಾಕ್ಸ್‌ನಲ್ಲಿ ಎಂಟ್ರಿ ಕೊಡಲು ಸಜ್ಜಾಗುತ್ತಿದ್ದಾರೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ. ಹೌದು, ಮಗನಿಗಾಗಿ ಕೊನೆ ಹಂತದಲ್ಲಿ ಬಿಎಸ್‌ವೈ ಕಸರತ್ತಿಗಿಳಿದಿದ್ದಾರೆ. ಪುತ್ರ ವಿಜಯೇಂದ್ರ ಪರ ದೆಹಲಿ ಪ್ರವಾಸಕ್ಕೆ ರಾಜಾಹುಲಿ ಚಿಂತನೆ ನಡೆಸಿದ್ದಾರಂತೆ. ರಾಜ್ಯಾಧ್ಯಕ್ಷ ಗದ್ದುಗೆ ಉಳಿಸಿಕೊಳ್ಳಲು ಪುತ್ರನಿಗಾಗಿ ಬಿ.ಎಸ್‌ವೈ ಪ್ರತಿತಂತ್ರ ರೂಪಿಸಿದ್ದಾರಂತೆ. ಮಗನ ರಿಪೋರ್ಟ್ ಕಾರ್ಡ್ ಹಿಡಿದು ದೆಹಲಿ ವಿಮಾನ ಹತ್ತಲು ಯಡಿಯೂರಪ್ಪ ಗಂಭೀರವಾಗಿ ಚಿಂತನೆ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಆಪ್ತರ ಜೊತೆ ದೆಹಲಿ ಭೇಟಿಯ ಸಾಧಕ-ಬಾಧಕ ಬಗ್ಗೆ ಬಿಎಸ್‌ವೈ ಮಂಥನ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮುಂದುವರಿದರೆ ಪಕ್ಷಕ್ಕೆ ಆಗುವ ಲಾಭದ ಬಗ್ಗೆ ಹೈಕಮಾಂಡ್‌ಗೆ ಮನವರಿಕೆ ಮಾಡುವುದು ಯಡಿಯೂರಪ್ಪ ಅವರ ಉದ್ದೇಶವಾಗಿದೆ. ಇದಕ್ಕಾಗಿ ಕಳೆದ ಒಂದೂವರೆ ವರ್ಷದಲ್ಲಿ ವಿಜಯೇಂದ್ರ ಸಾಧನೆ, ಸವಾಲು, ಸಂಘಟನೆ ಕುರಿತ ರಿಪೋರ್ಟ್ ಕಾರ್ಡ್ ಸಹ ತಮ್ಮೊಂದಿಗೆ ಯಡಿಯೂರಪ್ಪ ಒಯ್ಯುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ಪಕ್ಷ ಸಂಘಟನೆಗೆ, ಸರ್ಕಾರದ ವಿರುದ್ಧದ ಹೋರಾಟಕ್ಕೆ ಯಾರೆಲ್ಲ ಸಹಕರಿಸಿದರು? ಯಾರದ್ದೆಲ್ಲ ಅಸಹಕಾರವಿದೆ ಎಂದು ಮಾಹಿತಿ ಕೊಡಲಿದ್ದಾರೆ ಎಂದು ಅಂದಾಜಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!