ಉದಯವಾಹಿನಿ, ವಿಜಯಪುರ: ಬೆಳಗಾವಿಯಲ್ಲಿ 2ಎ ಮೀಸಲಾತಿ ಹೋರಾಟಗಾರರ ಮೇಲೆ ನಡೆದಿದ್ದ ಲಾಠಿಚಾರ್ಜ್ ಪ್ರಕರಣದ ನ್ಯಾಯಾಂಗ ತನಿಖೆಗೆ ತಡೆ ನೀಡಬೇಕು ಎಂದು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಈ ವಿಚಾರಕ್ಕೆ ವಿಜಯಪುರದಲ್ಲಿ ಜಯಮೃತ್ಯುಂಜಯ ಸ್ವಾಮೀಜಿ ಸಂತಸ ವ್ಯಕ್ತಪಡಿಸಿದ್ದಾರೆ. ವಿಶೇಷ ಪೂಜೆ ಸಲ್ಲಿಸಿ, ಅವರು ಮಾತನಾಡಿದರು. ಕಾನೂನು ಬಾಹಿರವಾಗಿ ಪೊಲೀಸರಿಗೆ ಕುಮ್ಮಕ್ಕು ಕೊಟ್ಟು ಮಾರಣಾಂತಿಕವಾಗಿ ಸರ್ಕಾರ ಹಲ್ಲೆ ಮಾಡಿಸಿತ್ತು. ಕಾನೂನು ಬಾಹಿರವಾಗಿ ಹಲ್ಲೆ ಮಾಡಿರುವಂತಹ ಅಧಿಕಾರಿಗಳನ್ನ ಅಮಾನತು ಮಾಡಬೇಕು ಎಂದು ನಾವು ಆಗ್ರಹಿಸಿದ್ದೆವು ಎಂದಿದ್ದಾರೆ. ಕೆಲವು ಸಮಾಜದ ನಾಯಕರು ಅಧಿವೇಶನದಲ್ಲೂ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ರಾಜ್ಯ ಸರ್ಕಾರ ಇದಕ್ಕೆ ಸ್ಪಂದನೆ ಮಾಡಲಿಲ್ಲ. ನಂತರ ನಾನು 9 ದಿನಗಳ ಸತ್ಯಾಗ್ರಹ ಮಾಡಿ ಆಗ್ರಹಿಸಿದ್ದೆ. ಅದಕ್ಕೂ ಕ್ಯಾರೆ ಎನ್ನಲಿಲ್ಲ. ಬಳಿಕ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದೆವು. ಏ.4 ರಂದು ನಮ್ಮ ಅರ್ಜಿ ಸ್ವೀಕಾರ ಮಾಡಿ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿತ್ತು. ಅಲ್ಲದೇ 3 ತಿಂಗಳ ಒಳಗಾಗಿ ಮೂರು ಜನ ನ್ಯಾಯಮೂರ್ತಿಗಳ ಮೂಲಕ ತನಿಖೆ ಮಾಡಿ ವರದಿ ನೀಡಲು ಆದೇಶಿಸಿತ್ತು.
