ಉದಯವಾಹಿನಿ,ಬೆಂಗಳೂರು: ಬಾಂಬ್ ಸ್ಫೋಟಿಸಿ ಸಿನಿಮಾ ಸ್ಟೈಲ್‌ನಲ್ಲಿ ಪರಪ್ಪನ ಅಗ್ರಹಾರದಿಂದ ಪರಾರಿಯಾಗಲು ಟಿ ನಾಸೀರ್ ಮುಂದಾಗಿದ್ದ ಸ್ಫೋಟಕ ವಿಚಾರ ರಾಷ್ಟ್ರೀಯ ತನಿಖಾ ದಳದ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.ಹೌದು. 2008ರ ಬೆಂಗಳೂರು ಸ್ಫೋಟದಲ್ಲಿ ಜೈಲುಪಾಲಾಗಿರುವ ಲಷ್ಕರ್ ಸಂಘಟನೆಯ ಉಗ್ರ ನಾಸೀರ್ ಮುಸ್ಲಿಂ ಯುವಕರ ತಂಡ ಬಳಸಿ ಹೊರ ಬರಲು ಖತರ್ನಾಕ್ ಪ್ಲ್ಯಾನ್ ಮಾಡಿದ್ದ ವಿಚಾರ ಎನ್‌ಐಎ ಮೂಲಗಳಿಂದ ತಿಳಿದು ಬಂದಿದೆ.
ಏನಿದು ಯೋಜನೆ?
ಸದ್ಯದ ಪರಿಸ್ಥಿತಿಯಲ್ಲಿ ಹೊರ ಬರಲು ಸಾಧ್ಯವಿಲ್ಲ ಎಂಬುದನ್ನು ಅರಿತಿದ್ದ ನಾಸೀರ್ ಜೈಲಿನಲ್ಲೇ ಪ್ಲ್ಯಾನ್ ಮಾಡಿದ್ದ. ಪ್ರಕರಣ ಸಂಬಂಧ ನಾಸೀರ್‌ನನ್ನು ಜೈಲಿನಿಂದ ಹಲವು ಬಾರಿ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಲಾಗುತ್ತಿತ್ತು. ಈ ಜೈಲಿನಿಂದ ನ್ಯಾಯಾಲಯಕ್ಕೆ ಹೋಗುವಾಗ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದ. ಬಾಂಬ್ ಸ್ಫೋಟಗೊಂಡಾಗ ಪೊಲೀಸರ ಗಮನ ಬೇರೆಡೆ ಹೋಗುತ್ತದೆ. ಈ ವೇಳೆ ಪರಾರಿಯಾಗಬಹುದು ಎಂಬ ಲೆಕ್ಕಾಚಾರವನ್ನು ನಾಸೀರ್ ಹಾಕಿಕೊಂಡಿದ್ದ.
