ಉದಯವಾಹಿನಿ, ರಾಯಚೂರು: ಮಂತ್ರಾಲಯ ಬಳಿ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿ ನೀರುಪಾಲಾಗಿದ್ದ ಹಾಸನ ಮೂಲದ ಮೂವರು ಯುವಕರು ಶವವಾಗಿ ಪತ್ತೆಯಾಗಿದ್ದಾರೆ. ರಾಘವೇಂದ್ರ ಸ್ವಾಮಿ ದರ್ಶನಕ್ಕೆ ರಾಯರ ಮಠಕ್ಕೆ ಬಂದಿದ್ದ ಯುವಕರು ಶನಿವಾರ ಸಂಜೆ ನದಿಗೆ ಈಜಲು ಹೋದಾಗ ಘಟನೆ ನಡೆದಿತ್ತು. ನೀರಿನಲ್ಲಿ ನಾಪತ್ತೆಯಾಗಿದ್ದ ಸ್ಥಳದಲ್ಲೇ ಮೃತದೇಹಗಳು ಪತ್ತೆಯಾಗಿವೆ. ಶನಿವಾರದಿಂದ ನಿರಂತರ ಶೋಧಕಾರ್ಯ ಬಳಿಕ ನಾಪತ್ತೆಯಾದ ಶವಗಳು ಇಂದು ಪತ್ತೆಯಾಗಿವೆ. ಹಾಸನ ಮೂಲದ ಅಜಿತ್ (20), ಸಚಿನ್ (20), ಪ್ರಮೋದ್ (19) ಮೃತ ದುರ್ದೈವಿಗಳು.ಆಂಧ್ರಪ್ರದೇಶದ ಎಸ್‌ಡಿಆರ್‌ಎಫ್ ತಂಡದಿಂದ ನಡೆದ ಶೋಧ ಕಾರ್ಯದ ವೇಳೆ ಶವಗಳು ಪತ್ತೆಯಾಗಿವೆ. ಮಂತ್ರಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಶವಾಗಾರಕ್ಕೆ ರವಾನಿಸಲಾಗಿದೆ. ಮಕ್ಕಳನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
