ಉದಯವಾಹಿನಿ, ರಾಯಚೂರು: ಸಿರವಾರ ತಾಲೂಕಿನ ಕವಿತಾಳದಲ್ಲಿ ಗೇಟ್ ಬೀಗ ಮುರಿದು ಕಸ ವಿಲೇವಾರಿ ವಾಹನಗಳನ್ನು ಕದ್ದಿರುವ ಘಟನೆ ನಡೆದಿದೆ. ಕವಿತಾಳ ಪಟ್ಟಣ ಪಂಚಾಯತಿ ಕಚೇರಿ ಆವರಣದಲ್ಲಿನ ವಾಹನ ಕಳುವಾಗಿದೆ. ವಾಹನ ಕದಿಯುವ ಧಾವಂತದಲ್ಲಿ ಕಾಂಪೌಂಡ್‌ಗೆ ಡಿಕ್ಕಿ ಹೊಡೆದ ಕಳ್ಳರು ವಾಹನದೊಂದಿಗೆ ಪರಾರಿಯಾಗಿದ್ದಾರೆ. ಡೀಸೆಲ್ ಸಮಸ್ಯೆಯಿಂದ ಕಚೇರಿ ಆವರಣದಲ್ಲೇ ನಿಂತಿದ್ದ ವಾಹನಗಳಿಗೆ ಇತ್ತೀಚೆಗಷ್ಟೇ ಹಣ ಬಿಡುಗಡೆ ಮಾಡಿ ಎಲ್ಲಾ ವಾಹನಗಳಿಗೆ ಇನ್ಶೂರೆನ್ಸ್ ಮಾಡಿಸಲಾಗಿತ್ತು. 4 ಕಸ ವಿಲೇವಾರಿ ವಾಹನಗಳಲ್ಲಿ ಒಂದು ಗಾಡಿಯನ್ನ ಕಳ್ಳರು ಕದ್ದೊಯ್ದಿದ್ದಾರೆ. ಸುಮಾರು 8 ಲಕ್ಷ ರೂ. ಮೌಲ್ಯದ ಕಸ ವಿಲೇವಾರಿ ವಾಹನ ಕಳ್ಳತನವಾಗಿದೆ.
ನಿನ್ನೆ ಎರಡನೇ ಶನಿವಾರವಾಗಿದ್ದರಿಂದ ಕಚೇರಿಗೆ ರಜೆಯಿತ್ತು. ರಜಾದಿನ ನೋಡಿಕೊಂಡು ಕಳ್ಳರು ಕಳ್ಳತನಕ್ಕೆ ಮುಂದಾಗಿದ್ದಾರೆ. ಈ ಸಂಬಂಧ ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
