ಉದಯವಾಹಿನಿ, ಮಾಲೂರು : ವಿಧಾನಸಭಾ ಕ್ಷೇತ್ರದ ಶಾಸಕ ಕೆ.ವೈ.ನಂಜೇಗೌಡ ಜನತಾದಳದಿಂದ ಬೆಳೆದವರು. ಈಗ ಜನತಾದಳ ಎಲ್ಲಿದೆ ಎಂದು ಕೇಳುತ್ತಾರೆ, 2028ರ
ವಿ.ಚು.ಯಲ್ಲಿ ಜನತೆ ತಕ್ಕ ಪಾಠ ಕಲಿಸಿ ಮನೆಗೆ ಕಳುಹಿಸಲಿದ್ದಾರೆ. ಒಂದು ವೇಳೆ ಮುಂದಿನ ಚುನಾವಣೆಯಲ್ಲಿ ಮತ್ತೊಮ್ಮೆ ಅವರೇ ಆಯ್ಕೆಯಾದರೆ ತಾವು ಮಾಲೂರಿನತ್ತ ತಲೆ ಹಾಕುವುದಿಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಶಪಥ ಮಾಡಿದರು. ಮಾಲೂರು-ಹೊಸೂರು ರಸ್ತೆಯ ಆರ್.ಜಿ.ಕಲ್ಯಾಣ ಮಂಟಪದಲ್ಲಿ ಜನರೊಂದಿಗೆ ಜನತಾದಳ, ಜೆಡಿಎಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಭ್ರಷ್ಟ ಶಾಸಕರನ್ನು ಮಾಜಿ ಮಾಡಿ: ರಾಜ್ಯದಲ್ಲಿ ಇಂತಹ ಶಾಸಕರು ಹೆಚ್ಚಾಗಿರೋದಕ್ಕೆ ಜನತೆ ಕಷ್ಟ ಅನುಭವಿಸುವಂತಾಗಿದೆ. ಭೂಹಗರಣ,ಡೇರಿ ನೇಮಕಾತಿಯಲ್ಲಿ ಅವ್ಯವಹಾರ, ಹೈಕೋರ್ಟ್‌ನಲ್ಲಿ ನಂಜೇಗೌಡರ ವಿರುದ್ಧ ಪ್ರಕರಣಗಳಿವೆ. ತಾಲ್ಲೂಕು ಆಡಳಿತ ಭ್ರಷ್ಟಾಚಾರದಿಂದ ಕೂಡಿದೆ. ಭ್ರಷ್ಟ ಶಾಸಕರನ್ನು ಮಾಜಿ ಶಾಸಕರನ್ನಾಗಿ ಮಾಡಿ ಮನೆಗೆ ಕಳುಹಿಸುವ ಕೆಲಸ ಮಾಡಬೇಕು. ಕೋವಿಡ್ ಸಂಕಷ್ಟ ಎದುರಿಸಿದ ಸಂದರ್ಭದಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಜಿ.ಇ.ರಾಮೇಗೌಡರು ಜನರಿಗೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ.
