ಉದಯವಾಹಿನಿ, ಚನ್ನಪಟ್ಟಣ: ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿದ್ದ ಹಿರಿಯ ನಟಿ ಬಿ.ಸರೋಜಾದೇವಿ ಅವರು ವಿಧಿವಶರಾಗಿದ್ದಾರೆ. ಮಂಗಳವಾರ (ಜು.15) ಅವರ ಹುಟ್ಟೂರು ಚನ್ನಪಟ್ಟಣದ ದಶಾವರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.ಸರೋಜಾದೇವಿಯವರ ಮಗ ಗೌತಮ್ ಮಾತನಾಡಿ, ನಾಳೆ ಬೆಳಿಗ್ಗೆ 11:30ರವರೆಗೂ ಬೆಂಗಳೂರಿನ ಸ್ವಗೃಹದ ಬಳಿ ಅಂತಿಮದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಪಾರ್ಥಿವ ಶರೀರವನ್ನು ಚನ್ನಪಟ್ಟಣಕ್ಕೆ ಕರೆದೊಯ್ಯಲಾಗುವುದು. ಅಲ್ಲಿ ದಶಾವರದ ಕಣ್ವ ಡ್ಯಾಂ ಬಳಿ ಒಕ್ಕಲಿಗ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನೆರವೇರಲಿದೆ. ಅವರ ತಾಯಿ ರುದ್ರಮ್ಮ ಅವರ ಸಮಾಧಿಯ ಪಕ್ಕದಲ್ಲಿಯೇ ಸರೋಜಾದೇವಿಯವರ ಅಂತ್ಯಕ್ರಿಯೆ ನಡೆಯಲಿದ್ದು, ಇದು ಸರೋಜಾದೇವಿಯವರ ಕೊನೆಯಾಸೆಯಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.

ಅಂತ್ಯಕ್ರಿಯೆ ಹಿನ್ನೆಲೆ ಸ್ಥಳಕ್ಕೆ ರಾಮನಗರ ಎಸ್ಪಿ ಶ್ರೀನಿವಾಸ್ ಗೌಡ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸಾಕಷ್ಟು ರಾಜಕೀಯ ಗಣ್ಯರು, ಸಿನಿಮಾ ಕಲಾವಿದರು ಆಗಮಿಸುವ ಹಿನ್ನೆಲೆ ಅಂತಿಮ ದರ್ಶನದ ವ್ಯವಸ್ಥೆ ಹಾಗೂ ಪಾರ್ಕಿಂಗ್ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಸೂಕ್ತ ಪೊಲೀಸ್ ಬಂದೋಬಸ್ತ್ ನೀಡುವಂತೆ ಡಿಎವೈಎಸ್ಪಿ ಗಿರಿಗೆ ಸೂಚನೆ ನೀಡಿದ್ದಾರೆ.ಇನ್ನೂ ಸರೋಜಾದೇವಿ ಅಗಲಿಕೆಗೆ ಗ್ರಾಮಸ್ಥರು ಶ್ರದ್ಧಾಂಜಲಿ ಸಲ್ಲಿಸಿದ್ದು, ಅವರ ನಿವಾಸದ ಮುಂದೆ ಫೋಟೊ ಇಟ್ಟು ಪುಷ್ಪಾರ್ಚನೆ ಸಲ್ಲಿಸಿದ್ದಾರೆ. ಸರೋಜಾದೇವಿಯವರು ಗ್ರಾಮಕ್ಕೆ ಮೂರು ಶಾಲಾ ಕೊಠಡಿ ಕಟ್ಟಿಸಿಕೊಟ್ಟಿದ್ದು, ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೇ ಗ್ರಾಮದಲ್ಲಿ ಹೈಸ್ಕೂಲ್ ನಿರ್ಮಾಣಕ್ಕೆ ಅನುಮತಿ ಕೊಡಿಸಿದ್ದನ್ನ ನೆನೆದು ಗ್ರಾಮಸ್ಥರು ಭಾವುಕರಾದರು.

Leave a Reply

Your email address will not be published. Required fields are marked *

error: Content is protected !!