ಉದಯವಾಹಿನಿ, ಜೆರುಸಲೆಮ್: ಗಾಜಾದ ಮೇಲೆ ಇಸ್ರೇಲ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ನೀರು ತರಲು ತೆರಳಿದ್ದ 8 ಮಕ್ಕಳು ಸೇರಿ, 43 ಮಂದಿ ಸಾವನ್ನಪ್ಪಿದ್ದಾರೆ. ಇದರ ಬೆನ್ನಲ್ಲೇ, ಗಾಜಾ ಪಟ್ಟಿಯಾದ್ಯಂತ ನಡೆಸಿದ ವೈಮಾನಿಕ ದಾಳಿಯಲ್ಲಿ 150ಕ್ಕೂ ಹೆಚ್ಚು ಉಗ್ರರ ಅಡಗು ತಾಣಗಳನ್ನು ಹೊಡೆದುರುಳಿಸಿದ್ದೇವೆ ಎಂದು ಇಸ್ರೇಲ್ ಹೇಳಿಕೊಂಡಿದೆ.ಮಧ್ಯ ಗಾಜಾದಲ್ಲಿ ನೀರು ವಿತರಣಾ ಸ್ಥಳದಲ್ಲಿ ಸರದಿಯಲ್ಲಿ ಕಾಯುತ್ತಿದ್ದಾಗ ಇಸ್ರೇಲ್ ನಡೆಸಿದ ಕ್ಷಿಪಣಿ ದಾಳಿಗೆ 8 ಮಕ್ಕಳು ಸೇರಿದಂತೆ ಕನಿಷ್ಠ 10 ಜನ ಸಾವನ್ನಪ್ಪಿದ್ದಾರೆ. ಅಲ್ಲದೇ ಅದೇ ಭಾಗದ ಸುತ್ತಮುತ್ತ ನಡೆದ ದಾಳಿಯಲ್ಲಿ 33 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 43 ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸ್ಥಳೀಯ ನಿವಾಸಿಯೊಬ್ಬರು, ಎರಡು ದೊಡ್ಡ ಸ್ಫೋಟದ ಶಬ್ದಕ್ಕೆ ನಮಗೆ ಎಚ್ಚರವಾಯಿತು. ಹೊರಗೆ ಬಂದು ನೋಡಿದಾಗ ನಮ್ಮ ನೆರೆಹೊರೆಯವರು ಮತ್ತು ಅವರ ಮಕ್ಕಳು ಅವಶೇಷಗಳ ಅಡಿಯಲ್ಲಿದ್ದರು ಎಂದು ತಿಳಿಸಿದ್ದಾರೆ. ಮತ್ತೊಬ್ಬ ನಿವಾಸಿ ಮಹ್ಮದ್ ಅಲ್-ಶಾಮಿ, ಯುದ್ಧವನ್ನು ಕೊನೆಗೊಳಿಸಬೇಕು. ಇಂತಹ ಸ್ಥಿತಿ ಮಾನವಕುಲದ ಸಂಪೂರ್ಣ ಇತಿಹಾಸದಲ್ಲಿ ಎಂದಿಗೂ ಸಂಭವಿಸಿಲ್ಲ. ಯುದ್ಧ ಸಾಕು ಎಂದು ಅವರು ಹೇಳಿಕೊಂಡಿದ್ದಾರೆ.
