ಉದಯವಾಹಿನಿ, ನವದೆಹಲಿ: ಜೂನ್​ 12ರಂದು ಅಹಮದಾಬಾದ್​​ನಲ್ಲಿ ಪತನಗೊಂಡ ವಿಮಾನದಲ್ಲಿ ಯಾವುದೇ ತಾಂತ್ರಿಕ ದೋಷ ಕಂಡುಬಂದಿಲ್ಲ ಎಂದು ತನಿಖೆ ನಡೆಸುತ್ತಿರುವ ಎಎಐಬಿ ಪ್ರಾಥಮಿಕ ವರದಿ ತಿಳಿಸಿದೆ ಎಂದು ಏರ್​ ಇಂಡಿಯಾ ಸಿಇಒ ಕ್ಯಾಂಪ್​​ಬೆಲ್ ವಿಲ್ಸನ್​ ಸೋಮವಾರ ಹೇಳಿದರು.
270ಕ್ಕೂ ಅಧಿಕ ಜನರ ಸಾವಿಗೆ ಕಾರಣವಾಗಿದ್ದ ವಿಮಾನ ದುರಂತದ ಕುರಿತು ವಿಮಾನ ಅಪಘಾತಗಳ ತನಿಖಾ ಸಂಸ್ಥೆಯು (ಎಎಐಬಿ) ಪ್ರಾಥಮಿಕ ತನಿಖಾ ವರದಿ ಬಿಡುಗಡೆ ಮಾಡಿದೆ. ಅದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಏರ್​ ಇಂಡಿಯಾ ಸಿಇಒ, “ಎಎಐಬಿ ಇನ್ನೂ ತನಿಖೆ ಮುಗಿಸಿಲ್ಲ. ಯಾವುದೇ ನಿಖರ ಕಾರಣಗಳನ್ನೂ ಗುರುತಿಸಿಲ್ಲ. ಹೀಗಾಗಿ, ಈ ಹಂತದಲ್ಲಿಯೇ ತೀರ್ಮಾನಕ್ಕೆ ಬರಬೇಕಿಲ್ಲ” ಎಂದು ಹೇಳಿದ್ದಾರೆ.
ವಿಮಾನಗಳಲ್ಲಿ ಸಮಸ್ಯೆ ಇಲ್ಲ: ದುರಂತದ ಕುರಿತು ಆತಂಕದಲ್ಲಿರುವ ವಿಮಾನಯಾನ ಸಿಬ್ಬಂದಿಗೆ ಸಂದೇಶ ರವಾನಿಸಿರುವ ಅವರು, “ಎಂಜಿನ್‌ಗಳಲ್ಲಿ ಯಾವುದೇ ತಾಂತ್ರಿಕ ಅಥವಾ ನಿರ್ವಹಣಾ ಸಮಸ್ಯೆಗಳಿಲ್ಲ. ಎಲ್ಲವೂ ಉತ್ತಮ ಸ್ಥಿತಿಯಲ್ಲಿವೆ” ಎಂದು ಪ್ರಾಥಮಿಕ ವರದಿಯನ್ನು ಉಲ್ಲೇಖಿಸಿದ್ದಾರೆ.
“ಇಂಧನದ ಗುಣಮಟ್ಟದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಟೇಕ್ ಆಫ್ ವೇಳೆಯೂ ಯಾವುದೇ ಅಸಹಜತೆ ಸಂಭವಿಸಿಲ್ಲ. ಪೈಲಟ್‌ಗಳು ಹಾರಾಟಕ್ಕೂ ಮೊದಲು ಉತ್ತಮ ಸ್ಥಿತಿಯಲ್ಲಿದ್ದರು. ವೈದ್ಯಕೀಯವಾಗಿಯೂ ಯಾವುದೇ ಲೋಪ ಇರಲಿಲ್ಲ” ಎಂದಿದ್ದಾರೆ.
ವಿಮಾನಯಾನದ ನಿಯಂತ್ರಕ ಸಂಸ್ಥೆಯಾದ ಡಿಜಿಸಿಎ, ಏರ್​​ ಇಂಡಿಯಾದಲ್ಲಿನ ಪ್ರತಿಯೊಂದು ಬೋಯಿಂಗ್ 787 ವಿಮಾನಗಳನ್ನು ಪರಿಶೀಲಿಸಿದೆ. ಅವೆಲ್ಲವೂ ಸೇವೆಗೆ ಯೋಗ್ಯವಾಗಿವೆ ಎಂದು ದೃಢೀಕರಿಸಿದೆ” ಎಂದು ವಿಲ್ಸನ್ ಹೇಳಿದ್ದಾರೆ. ಅಹಮದಾಬಾದ್​ ವಿಮಾನ ದುರಂತದ ಕಾರಣ ತಿಳಿಯಲು ತನಿಖೆ ನಡೆಸುತ್ತಿರುವ AAIB ಜೂನ್​ 11ರಂದು ಮಧ್ಯರಾತ್ರಿ ತನ್ನ ಪ್ರಾಥಮಿಕ ವರದಿಯನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಎಂಜಿನ್​​ಗಳ ಇಂಧನ ಸರಬರಾಜು ಮಾಡುವ ಸ್ವಿಚ್​​ಗಳು ಬಂದ್​ ಆಗಿದ್ದವು ಎಂದು ಪ್ರಸ್ತಾಪಿಸಿದೆ. ವಿಮಾನ ಹಾರಿದ ಕೆಲವೇ ಸೆಕೆಂಡುಗಳಲ್ಲಿ ಎರಡು ಇಂಜಿನ್​ಗಳಿಗೆ ಇಂಧನ ಪೂರೈಕೆ ನಿಂತಿದೆ. ಅದರ ಸ್ವಿಚ್​​ಗಳು RUN ನಿಂದ CUT OFF ಆಗಿದ್ದವು. ಇದರಿಂದ ಇಂಧನ ಸರಬರಾಜಾಗದೆ ವಿಮಾನ ಮೇಲೆಕ್ಕೆ ಹಾರಲು ಸಾಧ್ಯವಾಗಿಲ್ಲ ಎಂದು ತಿಳಿಸಿದೆ.

 

Leave a Reply

Your email address will not be published. Required fields are marked *

error: Content is protected !!