ಉದಯವಾಹಿನಿ, ಬೆಂಗಳೂರು: ರಸ್ತೆ ಸಿಗ್ನಲ್‌ನಲ್ಲಿ ದಾರಿ ಬಿಡಲಿಲ್ಲ ಎಂದು ಫುಡ್ ಡೆಲಿವರಿ ಎಕ್ಸಿಕ್ಯೂಟಿವ್ ಮೇಲೆ ಹಲ್ಲೆ ಮಾಡಿರುವ ಘಟನೆ ಭಾನುವಾರ ರಾತ್ರಿ ಬಸವೇಶ್ವರನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮೋದಿ ಆಸ್ಪತ್ರೆ ಸಿಗ್ನಲ್ ಬಳಿ ನಡೆದಿದ್ದು, ಪೀಮ್‌ರಾಮ್ ಎಂಬಾತನ ಮೇಲೆ ಮೂವರು ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ರಾಜಸ್ಥಾನ ಮೂಲದ ಪೀಮ್‌ರಾಮ್ ನಗರದಲ್ಲಿ ಫುಡ್ ಡೆಲಿವರಿ ಎಕ್ಸಿಕ್ಯೂಟಿವ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಭಾನುವಾರ ರಾತ್ರಿ ಮೋದಿ ಆಸ್ಪತ್ರೆ ಬಳಿ ರೆಡ್ ಸಿಗ್ನಲ್ ಇದ್ದಾಗ ಬೈಕ್ ನಿಲ್ಲಿಸಿದ್ದ. ಈ ವೇಳೆ, ಹಿಂಬದಿಯಿಂದ ಬೈಕ್‌ನಲ್ಲಿ ಬಂದಿದ್ದ ಮೂವರು, ‘ದಾರಿ ಬಿಡು ನಾವು ಹೋಗುತ್ತೇವೆ’ ಎಂದಿದ್ದಾರೆ. ‘ಗ್ರೀನ್ ಸಿಗ್ನಲ್ ಬರಲಿ ಮುಂದೆ ಹೋಗುತ್ತೇನೆ’ ಎಂದು ಪೀಮ್‌ರಾಮ್ ಉತ್ತರಿಸಿದ್ದ. ಅಷ್ಟಕ್ಕೆ ಸಿಟ್ಟಿಗೆದ್ದ ಆರೋಪಿಗಳು ಪೀಮ್‌ರಾಮ್‌ನ ಮೇಲೆ ಹಲ್ಲೆ ಮಾಡಿದ್ದಾರೆ.
ಆರೋಪಿಗಳ ಕೃತ್ಯದಿಂದ ಪೀಮ್‌ರಾಮ್‌ನ ಮುಖ, ತಲೆಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಪೀಮ್‌ರಾಮ್ ನೀಡಿರುವ ದೂರಿನ ಅನ್ವಯ ಬಸವೇಶ್ವರ ನಗರ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದ್ದು, ಘಟನಾ ಸ್ಥಳದ ಸಿಸಿಟಿವಿ ದೃಶ್ಯಗಳನ್ನ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹೊಡೆದು ಗಂಭೀರವಾಗಿ ಹಲ್ಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಜುಲೈ 11ರಂದು ರಾತ್ರಿ ಚಾಮರಾಜಪೇಟೆ ಠಾಣೆ ವ್ಯಾಪ್ತಿಯ ರುದ್ರಪ್ಪ ಗಾರ್ಡನ್‌ನಲ್ಲಿ ಘಟನೆ ನಡೆದಿದ್ದು, ದುಷ್ಕರ್ಮಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ತೇಜಸ್ (24) ಎಂಬಾತನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಆಟೋ ಚಾಲಕನಾಗಿದ್ದ ತೇಜಸ್, ಶುಕ್ರವಾರ ರಾತ್ರಿ ಕೆಲಸ ಮುಗಿದ ಬಳಿಕ ಸ್ನೇಹಿತ ಸಂತೋಷ್ ಜೊತೆ ರುದ್ರಪ್ಪ ಗಾರ್ಡನ್‌ನಲ್ಲಿರುವ ಮಂಜು ಬಾರ್‌ಗೆ ತೆರಳಿದ್ದ. ಇಬ್ಬರೂ ಪಾರ್ಟಿ ಮಾಡುತ್ತಿದ್ದಾಗ ಸಂತೋಷ್‍ನ ಸ್ನೇಹಿತರಾದ ರಾಹುಲ್, ಪ್ರಜ್ವಲ್ ಹಾಗೂ ಅಭಿಷೇಕ್ ಬಾರ್‌ಗೆ ಬಂದಿದ್ದರು. ಒಟ್ಟಿಗೆ ಕುಳಿತಿದ್ದಾಗ ಕ್ಷುಲ್ಲಕ ಕಾರಣಕ್ಕೆ ಸಂತೋಷ್ ಹಾಗೂ ರಾಹುಲ್, ಪ್ರಜ್ವಲ್, ಅಭಿಷೇಕ್‌ನ ನಡುವೆ ಜಗಳ ಆರಂಭವಾಗಿತ್ತು.
