ಉದಯವಾಹಿನಿ, ಚಿಕ್ಕೋಡಿ: ಮಹಾರಾಷ್ಟ್ರ ಸತಾರ ಜಿಲ್ಲೆಯಲ್ಲಿರುವ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಐದು ಸಾವಿರ ಕ್ಯೂಸೆಕ್ ನೀರು ಹರಿಬಿಡಲಾಗಿದೆ. ಕೊಯ್ನಾ ಜಲಾಶಯ 105 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿದ್ದು, ಸದ್ಯ 76 ಟಿಎಂಸಿ ಭರ್ತಿಯಾಗಿದೆ. ಮಹಾರಾಷ್ಟ್ರದ ಪಶ್ಚಿಮಘಟ್ಟ ಹಾಗೂ ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕೆ ಕ್ರಮವಾಗಿ ನೀರು ಬಿಡಲಾಗಿದೆ.ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಪಂಚ ನದಿಗಳಲ್ಲಿ ನೀರಿನಮಟ್ಟ ಇಳಿಕೆ: ಮಹಾರಾಷ್ಟ್ರದಲ್ಲಿ ಹಾಗೂ ಚಿಕ್ಕೋಡಿ – ನಿಪ್ಪಾಣಿ ತಾಲೂಕಿನಲ್ಲಿ ಮಳೆಯ ಪ್ರಮಾಣ ಕಳೆದ 5 ದಿನಗಳಿಂದ ಕಡಿಮೆಯಾಗಿದೆ. ಇದರಿಂದ ಕೃಷ್ಣಾ ನದಿ ನೀರಿನ ಮಟ್ಟ ಇಳಿಕೆಯಾಗಿದ್ದು, ಮುಳುಗಡೆಯಾಗಿದ್ದ ಸೇತುವೆಗಳು ಈಗ ಸಂಚಾರಕ್ಕೆ ಮುಕ್ತವಾಗಿವೆ. ಇಂದು ಕೃಷ್ಣಾ ನದಿಯ ಕಲ್ಲೋಳ-ಯಡೂರ ಮತ್ತು ಮಾಂಜರಿ-ಸವದತ್ತಿ ಬ್ಯಾರೇಜ್ಗಳು ಸಂಚಾರಕ್ಕೆ ಮುಕ್ತಗೊಂಡಿವೆ.ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್ನಿಂದ ಕೃಷ್ಣಾ ನದಿಗೆ 43,500 ಕ್ಯೂಸೆಕ್ ಹಾಗೂ ಹಿಪ್ಪರಗಿ ಬ್ಯಾರೇಜ್ನಿಂದ 51,948 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ನಿಪ್ಪಾಣಿ ಭಾಗದಲ್ಲಿರುವ ವೇದಗಂಗಾ ನದಿಯ ನೀರಿನ ಪ್ರಮಾಣ ಕಡಿಮೆಯಾಗಿದೆ. ಜತ್ರಾಟ-ಭಿವಸಿ, ಭೋಜವಾಡಿ ಅಕ್ಕೋಳ, ಸಿದ್ನಾಳ -ಶಿವಾಪುರವಾಡಿ ಮತ್ತು ಕುನ್ನೂರ-ಬಾರವಾಡ, ದೂಧಗಂಗಾ ನದಿಯ ಕಾರದಗಾ-ಭೋಜ ಮತ್ತು ಮಲಿಕವಾಡ-ದತ್ತವಾಡ ಬ್ಯಾರೇಜ್ಗಳು ಹಾಗೂ ಕೃಷ್ಣಾ ನದಿಯ ದಿಯ ಕಲ್ಲೋಳ-ಯಡೂರ ಮತ್ತು ಮಾಂಜರಿ-ಸವದತ್ತಿ ಬ್ಯಾರೇಜ್ಗಳು ಸೇರಿದಂತೆ ಒಟ್ಟು ಎಂಟು ಬ್ಯಾರೇಜ್ಗಳು ಸಂಚಾರಕ್ಕೆ ಮುಕ್ತವಾಗಿವೆ.
ಹಿಡಕಲ್ ಜಲಾಶಯದಿಂದ 5 ಸಾವಿರ ಕ್ಯೂಸೆಕ್ ನೀರು ಬಿಡುಗಡೆ: ಪಶ್ಚಿಮಘಟ್ಟ ಪ್ರದೇಶದಲ್ಲಿ ಉತ್ತಮ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ನದಿ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಅಪಾರ ಪ್ರಮಾಣದ ನೀರು ನದಿಗೆ ಹರಿದು ಬರುತ್ತಿರುವುದರಿಂದ ಹಿಡಕಲ್ ಜಲಾಶಯದಿಂದ ನೀರು ಹೊರ ಬಿಡಲಾಗಿತ್ತು. ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಮಳೆ ಆಗುತ್ತಿರುವುದರಿಂದ ಬೆಳಗಾವಿ ಜಿಲ್ಲೆಯ ಸಪ್ತ ನದಿಗಳು ತುಂಬಿ ಹರಿಯುತ್ತಿವೆ.
