ಉದಯವಾಹಿನಿ, ನವದೆಹಲಿ: ಮುಂಗಾರು​ ಅಧಿವೇಶನ ಆರಂಭಕ್ಕೆ ಮುನ್ನ ರಾಜ್ಯಸಭಾ ಸಭಾಪತಿ ಜನದೀಪ್​ ಧನಕರ್​ ಅವರನ್ನು ಕಾಂಗ್ರೆಸ್​ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ನವದೆಹಲಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.ಈ ಕುರಿತು ಎಕ್ಸ್​ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಖರ್ಗೆ, ಸಭಾಪತಿಗಳನ್ನು ಭೇಟಿಯಾದೆ. ಪ್ರತಿಪಕ್ಷ ಫಲಪ್ರದ ಅಧಿವೇಶನವನ್ನು ಎದುರು ನೋಡುತ್ತಿದೆ ಎಂದು ತಿಳಿಸಿದ್ದಾರೆ.ಮುಂಗಾರು ಅಧಿವೇಶನ ಜುಲೈ 21ರಿಂದ ಆರಂಭವಾಗಲಿದ್ದು, ಒಂದು ತಿಂಗಳು ನಡೆಯಲಿದೆ. ಆಗಸ್ಟ್​ 21ರಂದು ಅಧಿವೇಶನ ಅಂತ್ಯಗೊಳ್ಳಲಿದ್ದು, ಆಗಸ್ಟ್​ 13 ಮತ್ತು 14ರಂದು ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಅಧಿವೇಶನ ನಡೆಯುವುದಿಲ್ಲ.
ಇದಕ್ಕೆ ಮುನ್ನ ಅಧಿವೇಶನ ಹಿನ್ನೆಲೆಯಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ನಿವಾಸದಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ಸೇರಿದಂತೆ ಅನೇಕ ನಾಯಕರು ಸಭೆ ನಡೆಸಿದ್ದರು.
ಕೇಂದ್ರ ಸರ್ಕಾರ ಜುಲೈ 19ರಂದು ಸರ್ವಪಕ್ಷಗಳ ಸಭೆ ಕರೆದಿದೆ ಎಂದು ಕೇಂದ್ರ ಸಂಸದೀಯ ಸಚಿವ ಕಿರಣ್​ ರಿಜಿಜು ತಿಳಿಸಿದ್ದಾರೆ.
ಅಧಿವೇಶನವನ್ನು ಜುಲೈ 21ರಿಂದ ಆಗಸ್ಟ್​ 21ರವರೆಗೆ ನಡೆಸಲು ರಾಷ್ಟ್ರಪತಿ ಅನುಮತಿ ನೀಡಿದ್ದು, ಆಗಸ್ಟ್​ 13 ಮತ್ತು 14ರಂದು ಅಧಿವೇಶನ ನಡೆಯುವುದಿಲ್ಲ ಎಂದು ರಿಜಿಜು ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟಪಡಿಸಿದ್ದರು.
ಆಪರೇಷನ್​ ಸಿಂಧೂರ್​​ ಬಳಿಕ ನಡೆಯುತ್ತಿರುವ ಮೊದಲ ಮುಂಗಾರು ಅಧಿವೇಶನ ಇದಾಗಿದೆ. ಪಹಲ್ಗಾಮ್​ ಉಗ್ರರ ದಾಳಿಯಲ್ಲಿ 26 ಜನರ ಹತ್ಯೆ ಖಂಡಿಸಿ, ಕೃತ್ಯದ ಬಗ್ಗೆ ಚರ್ಚಿಸಲು ಹಾಗೂ ಒಗ್ಗಟ್ಟು ಪ್ರದರ್ಶಿಸಲು ವಿಶೇಷ ಅಧಿವೇಶನ ಕರೆಯುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದರು. ಆದರೆ, ವಿಶೇಷ ಅಧಿವೇಶನಕ್ಕೆ ಸರ್ಕಾರ ಮುಂದಾಗಿರಲಿಲ್ಲ. ಇದೀಗ ಎಂದಿನಂತೆ ಔಪಚಾರಿಕ ಮುಂಗಾರು ಅಧಿವೇಶನ ನಡೆಯಲಿದೆ.

Leave a Reply

Your email address will not be published. Required fields are marked *

error: Content is protected !!