ಉದಯವಾಹಿನಿ, ನವದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ವ್ಯಕ್ತಿಯೊಬ್ಬರ ವಿರುದ್ಧ ಆಕ್ಷೇಪಾರ್ಹ ಭಾಷೆ ಬಳಕೆಯನ್ನು ಸುಪ್ರೀಂ ಕೋರ್ಟ್ ಖಂಡಿಸಿದೆ. ವಾಕ್ ಸ್ವಾತಂತ್ರ್ಯ ಇದೆ ಎಂದ ಮಾತ್ರಕ್ಕೆ ಯಾರು ಯಾರನ್ನು ಬೇಕಾದರೂ ಟೀಕಿಸಬಹುದೇ ಎಂದು ಪ್ರಶ್ನಿಸಿದೆ.ಮಧ್ಯಪ್ರದೇಶದ ವ್ಯಂಗ್ಯಚಿತ್ರಕಾರರೊಬ್ಬರು ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್ಎಸ್ಎಸ್ ಮುಖಂಡರನ್ನು ಅವಹೇಳನಕಾರಿಯಾಗಿ ಚಿತ್ರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ವಿಚಾರಣೆಯಲ್ಲಿ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಅರವಿಂದ್ ಕುಮಾರ್ ಅವರ ಪೀಠವು ‘ಅನಿಯಂತ್ರಿತ ಟೀಕೆ’ಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಹಂಚಿಕೊಂಡಾಗ, ಕಾನೂನಿನ ಪ್ರಕಾರ ಆಡಳಿತವು ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ಮುಕ್ತವಾಗಿರುತ್ತದೆ ಎಂದು ಪೀಠವು ಹೇಳಿದೆ.
ನ್ಯಾಯಪೀಠ ಹೇಳಿದ್ದೇನು?: “ಇಂದು ಏನಾಗಿದೆ ಎಂದರೆ, ಯಾರು ಬೇಕಾದರೂ ಯಾರ ವಿರುದ್ಧವೂ ಎಲ್ಲಾ ರೀತಿಯಾಗಿ ವಿಶ್ಲೇಷಿಸಿ ಟೀಕಿಸುತ್ತಾರೆ. ಅವರು ಬಳಸುವ ಭಾಷೆ ಎಂಥದ್ದು ಎಂಬುದನ್ನೂ ಅರಿಯುವುದಿಲ್ಲ. ನ್ಯಾಯಾಂಗ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಇಂತಹ ನಡೆಯ ವಿರುದ್ಧ ನಾವು ಏನಾದರೂ ಮಾಡಬೇಕಿದೆ” ಎಂದು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರು ಅಭಿಪ್ರಾಯಪಟ್ಟರು.ಪ್ರಕರಣದಲ್ಲಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ಅವರು, ಕೆಲವರು ಸಾರ್ವಜನಿಕ ವಲಯದಲ್ಲಿ ಹೀರೋ ಆಗಲು ಏನೇನೋ ಸ್ಟಂಟ್ ಮಾಡುತ್ತಾರೆ. ಆಪಾದಿತ ವ್ಯಂಗ್ಯ ಚಿತ್ರಕಾರರು ರಾಜಕೀಯ ಗಣ್ಯರಲ್ಲದೇ, ನ್ಯಾಯಾಂಗದ ಬಗ್ಗೆಯೂ ಲಘವಾಗಿ ವ್ಯಂಗ್ಯಚಿತ್ರಗಳನ್ನು ರೂಪಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ ಎಂದು ಆರೋಪಿಸಿದರು.
ಅರ್ಜಿದಾರರ ಪರ ವಾದಿಸಿದ ವಕೀಲೆ ವೃಂದಾ ಗ್ರೋವರ್ ಅವರು, ತಮ್ಮ ಕಕ್ಷಿದಾರರಿಗೆ ಒಂದು ಅವಕಾಶ ನೀಡುವಂತೆ ಪೀಠವನ್ನು ಕೋರಿದರು. ಇನ್ನೊಮ್ಮೆ ಇಂತಹ ತಪ್ಪು ಎಸಗುವುದಿಲ್ಲ. ಈಗಾಗಲೇ ಪೋಸ್ಟ್‌ಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದೆ. ನನ್ನ ಕಕ್ಷಿದಾರರ ವಿರುದ್ಧ ಪಂಡೋರಾ ಬಾಕ್ಸ್ ತೆರೆಯಲಾಗುತ್ತಿದೆ. ಆಕ್ಷೇಪಾರ್ಹ ವ್ಯಂಗ್ಯಚಿತ್ರಗಳ ಪೋಸ್ಟ್‌ಗಳನ್ನು ತಕ್ಷಣವೇ ಅಳಿಸಿ ಹಾಕಲಾಗುವುದು ಎಂದರು.
