ಉದಯವಾಹಿನಿ, ಹೈದರಾಬಾದ್ : ಮುತ್ತಿನ ನಗರಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ನೆತ್ತರು ಹರಿದಿದೆ. ಮುಂಜಾನೆ ಪಾರ್ಕ್ಗೆ ಕುಟುಂಬಸಮೇತ ವಾಕಿಂಗ್ ಹೋಗಿದ್ದ ಭಾರತೀಯ ಕಮ್ಯುನಿಷ್ಟ ಪಕ್ಷದ ರಾಜ್ಯ ಘಟಕದ ಮುಖಂಡನನ್ನು ದುಷ್ಕರ್ಮಿಗಳು ಗುಂಡಿನ ದಾಳಿ ಮಾಡುವ ಮೂಲಕ ಹತ್ಯೆಗೈದಿದ್ದಾರೆ. ಹೈದರಾಬಾದ್ನ ಮಲಕ್ಪೇಟ್ ಏರಿಯಾದಲ್ಲಿರುವ ಶಾಲಿವಾಹನ ನಗರ ಪಾರ್ಕ್ ಬಳಿ 43 ವರ್ಷ ವಯಸ್ಸಿನ ಚಂದು ನಾಯ್ಕ್ ಎಂಬುವರ ಭೀಕರ ಹತ್ಯೆಯಾಗಿದೆ. ಕಾರಿನಲ್ಲಿ ದಿಢೀರ್ ಬಂದ ದುಷ್ಕರ್ಮಿಗಳು ಚಂದು ನಾಯ್ಕ್ ಮೇಲೆ ಗುಂಡಿನಮಳೆಗರೆದರು. ಆರು ಸುತ್ತು ಗುಂಡು ಹಾರಿಸಿದ ಪರಿಣಾಮ ನಾಯ್ಕ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ದುಷ್ಕೃತ್ಯದ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಪತ್ನಿ ಮಗಳೆದುರೇ ಪ್ರಾಣಬಿಟ್ಟ ನಾಯ್ಕ್: ಪತ್ನಿ ಮತ್ತು ಮಗಳೊಂದಿಗೆ ಬೆಳಗ್ಗೆ ವಾಕಿಂಗ್ ಹೋಗಿದ್ದ ನಾಯ್ಕ್ ದುಷ್ಕರ್ಮಿಗಳ ಗುಂಡಿನ ದಾಳಿಯಿಂದ ಅವರೆದುರೇ ಪ್ರಾಣ ಬಿಟ್ಟಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ನಾಗರಕರ್ನೂಲ್ ಜಿಲ್ಲೆಯ ಬಾಲಮೂರು ತಾಲೂಕಿನ ನರಸಾಯಿಪಲ್ಲಿಯವರಾದ ಚಂದು ನಾಯ್ಕ್, ಹೈದರಾನಾದ್ನಲ್ಲಿ ಕುಟುಂಬಸಮೇತ ವಾಸಿಸುತ್ತಿದ್ದರು. ಈ ಕೊಲೆ ಭೂಮಿಯ ವಿವಾದದಿಂದ ನಡೆದಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ ಪೊಲೀಸರು, ಮಾಹಿತಿ ಕಲೆ ಹಾಕಿದರು. ಈ ಕೊಲೆಗೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿದ್ದಾರೆ.
