ಉದಯವಾಹಿನಿ, ಬೆಳಗಾವಿ: ಮಂಗಳಮುಖಿಯರು ಎಂದರೆ ಭಿಕ್ಷೆ ಬೇಡುವುದು, ಲೈಂಗಿಕ ವೃತ್ತಿ, ರೈಲಿನಲ್ಲಿ ದುಡ್ಡಿಗಾಗಿ ದೌರ್ಜನ್ಯ ಎಸಗುವುದು ಎಲ್ಲರ ಕಣ್ಮುಂದೆ ಬರುತ್ತದೆ. ಆದರೆ, ಮಂಗಳಮುಖಿಯರಲ್ಲೂ ಪ್ರತಿಭೆ, ಕವಿಹೃದಯ ಇದೆ ಎಂಬುದನ್ನು ಇಲ್ಲೊಬ್ಬರು ಸಾಧಿಸಿ ತೋರಿಸಿದ್ದಾರೆ. ಇವರು ಬರೆದ ಪದ್ಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪಠ್ಯದಲ್ಲಿದೆ. ಅಷ್ಟೇ ಅಲ್ಲ ಇವರು ಸಮಾಜದ ಮುಖ್ಯವಾಹಿನಿಗೆ ಬರುವ ಜೊತೆಗೆ ಇತರ ಮಂಗಳಮುಖಿಯರ ಸಬಲೀಕರಣಕ್ಕೂ‌ ಅವಿರತವಾಗಿ ಶ್ರಮಿಸುತ್ತಿದ್ದಾರೆ.

ಹೌದು, ಹೆಸರು ಚಾಂದಿನಿ. ಮೂಲತಃ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಹಳೆ ಸೋಸಲೆ ಗ್ರಾಮದ ಇವರು ಸದ್ಯ ಬೆಂಗಳೂರಲ್ಲಿ ವಾಸವಾಗಿದ್ದು, ತೃತೀಯ ಲಿಂಗಿಗಳ ಸಮುದಾಯದ ಕವಯಿತ್ರಿ ಆಗಿ ಗುರುತಿಸಿಕೊಂಡಿದ್ದಾರೆ.ಚಾಂದಿನಿ ಅವರು ರಚಿಸಿರುವ “ಮನದ ಕಣ್ಣು” ಕವನ ಸಂಕಲನದ “ನನ್ನ ಆಸ್ತಿ – ನನ್ನ ಜೀವನ” ಪದ್ಯವು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬಿ.ಎ., ಬಿಎಸ್​​ಡಬ್ಲ್ಯೂ ಹಾಗೂ ಸಿ.ಸಿ.ಜೆ.(ಬಿ.ಎ.) 6ನೇ ಸೆಮಿಸ್ಟರ್ ಅವಶ್ಯಕ ಕನ್ನಡ ಪಠ್ಯಪುಸ್ತಕದಲ್ಲಿ ಪ್ರಕಟಿಸಲಾಗಿದೆ. ಚಾಂದಿನಿ ಅವರ ಎರಡು ಪದ್ಯಗಳನ್ನು ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ.ಈ ಪಠ್ಯವನ್ನು ಬಂಡಾಯ ಸಾಹಿತಿಯೂ ಆಗಿರುವ ರಾಯಬಾಗ ಎಸ್.ಪಿ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಯಲ್ಲಪ್ಪ ಬಿ.ಹಿಮ್ಮಡಿ ಅವರು ಸಂಪಾದಿಸಿದ್ದಾರೆ. ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಮುಖ್ಯಸ್ಥ ಪ್ರೊ.ಎಸ್.ಎಂ.ಗಂಗಾಧರಯ್ಯ‌ ಅವರ ಪ್ರಧಾನ ಸಂಪಾದಕತ್ವದಲ್ಲಿ‌ ಈ‌ ಪಠ್ಯವು ಪ್ರಕಟವಾಗಿದೆ.

Leave a Reply

Your email address will not be published. Required fields are marked *

error: Content is protected !!