ಉದಯವಾಹಿನಿ, ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಏಪ್ರಿಲ್ 22ರಂದು ನಡೆದ ಭಯೋತ್ಪಾದನಾ ದಾಳಿಗೆ ಸಂಬಂಧಿಸಿ ಇಬ್ಬರು ಸ್ಥಳೀಯ ನಿವಾಸಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ) ವಿಚಾರಣೆಗೆ ಒಳಪಡಿಸಿದೆ. ತನಿಖೆ ವೇಳೆ ಅವರಿಬ್ಬರು ಪ್ರವಾಸಿಗರ ಮೇಲೆ ದಾಳಿ ನಡೆಸಿದ ಭಯೋತ್ಪಾದಕರ ಕುರಿತು ಕೆಲವು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಒಬ್ಬ ಭಯೋತ್ಪಾದಕನನ್ನು ನೋಡಿದ್ದಾನೆ ಎಂದು ಹಿರಿಯ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಬೈಸರನ್ ಕಣಿವೆಗೆ ಪ್ರವಾಸ ಬಂದಿದ್ದ 26 ಮಂದಿ ಸಾವನ್ನಪ್ಪಿದ್ದರು. ಈ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆ ತೀವ್ರ ವಿಚಾರಣೆಯನ್ನು ಆರಂಭಿಸಿದ್ದು, ತನಿಖೆಯನ್ನು ಚುರುಕುಗೊಳಿಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿ ಬಂದರು ನಿವಾಸಿಗಳಾದ ಪರ್ವೈಜ್ ಅಹ್ಮದ್ ಮತ್ತು ಬಶೀರ್ ಅಹ್ಮದ್ ಎಂಬವರ ವಿಚಾರಣೆ ನಡೆಸಲಾಗಿದೆ. ಇದರಿಂದ ಹಲವು ಮಹತ್ವದ ಮಾಹಿತಿಗಳು ಅಧಿಕಾರಿಗಳಿಗೆ ಸಿಕ್ಕಿದೆ ಎನ್ನಲಾಗಿದೆ.
ದಾಳಿಯ ಬಳಿಕ ಭಯೋತ್ಪಾದಕರು ತಪ್ಪಿಸಿಕೊಳ್ಳುತ್ತಿದ್ದಾಗ ಅವರನ್ನು ನೋಡಿದ ಸ್ಥಳೀಯ ಸಾಕ್ಷಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಗುರುತಿಸಿದೆ. ಭಯೋತ್ಪಾದಕರು ತಪ್ಪಿಸಿಕೊಳ್ಳುವಾಗ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಗಾಯಾಳುಗಳಿಗೆ ಯಾರೂ ಸಹಾಯ ಮಾಡದಂತೆ ತಡೆಯಲು ಅವರು ಈ ರೀತಿ ಮಾಡಿರಬಹುದು ಎಂದು ಭಯೋತ್ಪಾದಕನನ್ನು ನೋಡಿದ ಸ್ಥಳೀಯ ಸಾಕ್ಷಿದಾರ ಹೇಳಿರುವುದಾಗಿ ಹಿರಿಯ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
