ಉದಯವಾಹಿನಿ, ಯಾದಗಿರಿ: ರಾಯಚೂರಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್​ ಬಳಿ ಗಂಡನನ್ನು ಪತ್ನಿಯೇ ನದಿಗೆ ತಳ್ಳಿದ ಆರೋಪ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಈ ಪ್ರಕರಣ ಭಾರಿ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ದಂಪತಿಯ ವೈವಾಹಿಕ ಸಂಬಂಧ ಮುರಿದುಬಿದ್ದಿದೆ. ನದಿಗೆ ತಳ್ಳಿ ಸಾಯಿಸಲು ಯತ್ನಿಸಿದ್ದಾಳೆಂದು ಪತ್ನಿ ಗದ್ದೆಮ್ಮ ಮೇಲೆ ಪತಿ ತಾತಪ್ಪ ಆರೋಪ ಮಾಡಿದ್ದರು. ಈ ಪ್ರಕರಣದ ಬೆನ್ನಲ್ಲೇ ದಂಪತಿಯ ಮೂರು ತಿಂಗಳ ವೈವಾಹಿಕ ಸಂಬಂಧ ಅಂತ್ಯವಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಪಂಚಾಯಿತಿ ನಡೆಸಿ ಪತಿ ತಾತಪ್ಪ, ಗದ್ದೆಮ್ಮನಿಂದ ವಿಚ್ಛೇದನ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ವಿಚ್ಛೇದನದ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ದೇವರಗಡ್ಡಿ ಗ್ರಾಮದ ಗದ್ದೆಮ್ಮ ಹಾಗೂ ಆಕೆ ಕುಟುಂಬಸ್ಥರು ಮರ್ಯಾದೆಗೆ ಅಂಜಿ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾರೆ. ಈ ಬಗ್ಗೆ ಗದ್ದೆಮ್ಮ ಪ್ರತಿಕ್ರಿಯಿಸಿದ್ದು, ಈಗಾಗಲೇ ಎಲ್ಲಾ ಮುಗಿದು ಹೋಗಿದೆ. ನೆನ್ನೆ ನ್ಯಾಯ ಪಂಚಾಯಿತಿ ಮಾಡಿ, ತಾಳಿ ಹಾಗೂ ಕಾಲುಂಗುರ ತೆಗೆದುಕೊಂಡು ಹೋಗಿದ್ದಾರೆ. ಊರಿನ ಹಿರಿಯರ ಸಮ್ಮುಖದಲ್ಲಿ ಕುಳಿತು ನ್ಯಾಯ ಪಂಚಾಯಿತಿ ಮಾಡಿದ್ದಾರೆ. ನನಗೆ ಇಷ್ಟ ಇದೆ ಅಂತಾನೆ ಮದುವೆ ಆಗಿದ್ದೆ. ಆದರೆ ನಾನೇ ನದಿಗೆ ತಳ್ಳಿದ್ದೇನೆಂದು ಹೇಳಿದ್ದಾರೆ. ನಾನ್ಯಾಕೆ ಹಂಗೆ ಮಾಡಲಿ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ತಾತಪ್ಪನ ಸಹೋದರ ಅಶೋಕ್, ನದಿಗೆ ತಳ್ಳಿದ ಬಳಿಕ ಆಕೆ ಕೈಯಲ್ಲಿ ಚಪ್ಪಲಿ ಹಿಡಿದಿದ್ದಳು. ಘಟನೆ ಬಳಿಕ ತಾತಪ್ಪ ಸಾಕಷ್ಟು ನೊಂದಿದ್ದು, ಮನೆಯಿಂದ ಆಚೆ ಬರುತ್ತಿಲ್ಲ. ಹಾಗಾಗಿ ನಾವು ಮಾಧ್ಯಮಕ್ಕೆ ಹೇಳಿಕೆ ನೀಡುತ್ತಿದ್ದೇವೆ. ಗದ್ದೆಮ್ಮ ಕಡು ಬಡವರಾಗಿದ್ದರೂ ನಾವು ನಮ್ಮ ಹುಡುಗನಿಗೆ ಮದುವೆ ಮಾಡಿದೆವು. ನಮ್ಮ ಬಂಗಾರದ ಸೂಜಿ ನಮ್ಮ ಕಣ್ಣಿಗೆ ಚುಚ್ಚಿದೆ. ಗಂಡ ನದಿಗೆ ಬಿದ್ದ ತಕ್ಷಣ ಪತ್ನಿ ಅವನಿಗೆ ಚಪ್ಪಲಿ ತೋರಿಸಿದ್ದಾಳೆ. ಅವಳಿಗೆ ಅವನು ಇಷ್ಟವಿಲ್ಲದ ಕಾರಣ ಚಪ್ಪಲಿ ತೋರಿಸಿದ್ದಾಳೆ. ನದಿಗೆ ಬಿದ್ದ ತಕ್ಷಣ ಅವಳ ಚಿಕ್ಕಮ್ಮಳಿಗೆ ಕರೆ ಮಾಡಿದ್ದಾಳೆ. ಗಂಡ ನದಿಗೆ ಬಿದ್ದಾಗ ಸಹಾಯ ಮಾಡಿ ಎಂದು ಜನರ ಕರೆಯಬೇಕು. ಆದರೆ ಆಕೆ ಕೈಯಲ್ಲಿ‌ ಚಪ್ಪಲಿ ಹಿಡಿದಿದ್ದರಿಂದ ತಾತಪ್ಪಗೆ ಸಿಟ್ಟು ಬಂದಿದೆ. ಹಾಗಾಗಿ ಅವಳಿಗೆ ವಿಚ್ಛೇದನ ನೀಡಲು ಎರಡು ಕುಟುಂಬದವರಿಂದ ಒಪ್ಪಿಗೆ ಪಡೆಯಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!