ಉದಯವಾಹಿನಿ, ಅಫ್ಘಾನಿಸ್ತಾನ: ರಾಜಧಾನಿ ಕಾಬೂಲ್ನಲ್ಲಿ ನೀರಿನ ತೀವ್ರ ಸಂಕಷ್ಟ ಎಂದುರಾಗಿದೆ. ಕೇವಲ 5 ವರ್ಷಗಳಲ್ಲಿ ಈ ಮಹಾನಗರ ನೀರಿಲ್ಲದೇ (Water) ಒಣಗಿ ಹೋಗುವ ಸಾಧ್ಯತೆ ಇದೆ ಎಂದು ಅಂತಾರಾಷ್ಟ್ರೀಯ ಸಂಸ್ಥೆ ಮರ್ಸಿ ಕಾರ್ಪ್ಸ್ ಎಚ್ಚರಿಕೆಯ ವರದಿಯನ್ನು ನೀಡಿದೆ. ನೀರಿನ ಸಮಸ್ಯೆಯಿಂದಾಗಿ ಜನ ತಳ್ಳುವ ಗಾಡಿಗಳಲ್ಲಿ ನೀರು ಸಂಗ್ರಹಿಸಲು ಕಿಲೋ ಮೀಟರ್‌ಗಟ್ಟಲೇ ಅಲೆಯಬೇಕಾಗಿದೆ. ಕಾಬೂಲ್ನಲ್ಲಿರುವ ತೋಟಗಳು, ಮರಗಳೆಲ್ಲಾ ಒಣಗಿ ಹೋಗುತ್ತಿವೆ. ಈಗಾಗಲೇ ನಗರದ ಅರ್ಧದಷ್ಟು ಬೋರ್‌ವೆಲ್‌ಗಳು ನೀರಿಲ್ಲದೆ ಬತ್ತಿ ಹೋಗಿವೆ. ನೀರಿನ ಕೊರತೆ ಆ ದೇಶಕ್ಕೆ ಮಾರಕವಾಗಿ ಕಾಡುತ್ತಿದೆ.
ಅಫ್ಘಾನಿಸ್ಥಾನದಲ್ಲಿ ಹವಾಮಾನ ವೈಪರೀತ್ಯ ಹೆಚ್ಚಾಗಿದೆ. ಅದರ ಜೊತೆಗೆ ಜನ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. 2001ರಲ್ಲಿ ಕಾಬೂಲ್ನಲ್ಲಿ 1 ಮಿಲಿಯನ್‌ಗಿಂತಲೂ ಕಡಿಮೆ ಜನರಿದ್ದರು. ಆದರೆ ಆ ಸಂಖ್ಯೆ ಈಗ 7 ಪಟ್ಟು ಹೆಚ್ಚಾಗಿದೆ! ಇದರಿಂದ ನೀರಿನ ಬಳಕೆ ಕೂಡ ಹೆಚ್ಚಾಗಿದೆ. ಇಲ್ಲಿನ ನೀರನ್ನೂ ಪ್ರತಿದಿನದ ದಿನಸಿ ಸಾಮಾನುಗಳಂತೆ ಕೊಂಡುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಆ ಮಟ್ಟದಲ್ಲಿ ನೀರಿನ ಬರ ಎದುರಾಗಿದೆ.
ಕಾಬೂಲ್ ನಗರದಲ್ಲಿ 80% ಅಂತರ್ಜಲ ಇದೆ. ಆದರೆ ಆ ನೀರು ಕಲುಷಿತಗೊಂಡಿದೆ. ಇಲ್ಲಿ ಹೆಚ್ಚಿನ ಮಟ್ಟದಲ್ಲಿ ಒಳಚರಂಡಿ, ಲವಣಾಂಶ ಮತ್ತು ಆರ್ಸೆನಿಕ್ ಸೇರಿರುವ ನೀರು ಸೇರಿಕೊಂಡಿದೆ. ಇದು ಕುಡಿಯಲು ಹಾಗೂ ಕೃಷಿಗೆ ಬಳಸಲು ಯೋಗ್ಯವಾಗಿಲ್ಲ. ಈಗಾಗಲೇ ಕಾಬೂಲ್ನ ಜನ ನೀರಿನ ಸಮಸ್ಯೆಯಿಂದ ವಲಸೆ ಹೋಗುತ್ತಿದ್ದಾರೆ.
