ಉದಯವಾಹಿನಿ, ನವದೆಹಲಿ: ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರತ ಅದ್ಭುತ ಸಾಧನೆಗೈಯುತ್ತಿದೆ. ಪಳೆಯುಳಿಕೆಯೇತರ ಇಂಧನ ಉತ್ಪಾದನೆಯಲ್ಲಿ 5 ವರ್ಷ ಮೊದಲೇ ಗುರಿ ಸಾಧಿಸಿರುವುದು ಹೆಮ್ಮೆಯ ಸಂಗತಿ ಎಂದು ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.ನವೀಕರಿಸಬಹುದಾದ ಇಂಧನ ವಲಯದಲ್ಲಿ 2030ರ ವೇಳೆಗೆ ಭಾರತ ಒಟ್ಟಾರೆ 484.8 GW ಸ್ಥಾಪಿತ ವಿದ್ಯುತ್ ಸಾಮರ್ಥ್ಯದ ಗುರಿಯೊಂದಿಗೆ ಹೆಜ್ಜೆ ಹಾಕಿತ್ತು. ಆದರೆ ಪಳೆಯುಳಿಕೆಯೇತರ ಇಂಧನದಲ್ಲಿ ಅದಾಗಲೇ 242.8 GW ಸಾಮರ್ಥ್ಯ ಪೂರೈಸಿದೆ. ಪ್ಯಾರಿಸ್ ಒಪ್ಪಂದಕ್ಕೆ ಅನುಗುಣವಾಗಿ 5 ವರ್ಷ ಮೊದಲೇ ಗುರಿ ಸಾಧಿಸಿ ಹೊಸ ಮೈಲಿಗಲ್ಲು ಸ್ಥಾಪಿಸಿರುವ ದೇಶದ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಜಾಗತಿಕ ಸನ್ನಿವೇಶದಲ್ಲಿ ಭಾರತದ ಈ ಪ್ರಗತಿ ಮಹತ್ವ ಪಡೆದಿದೆ. ಎನ್‌ಡಿಸಿ ಬದ್ಧತೆಗಳನ್ನು ಪೂರೈಸುವ ಹಾದಿಯಲ್ಲಿರುವ ಕೆಲವೇ ಜಿ20 ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದ್ದು, ಶುದ್ಧ ಇಂಧನ ಪರಿವರ್ತನೆಯಲ್ಲಿ ಭಾರತ ತನ್ನ ನಾಯಕತ್ವವನ್ನು ಬಲಪಡಿಸುತ್ತದೆ ಎಂದಿದ್ದಾರೆ. ಜೊತೆಗೆ ಹಸಿರು ಮತ್ತು ಸುಸ್ಥಿರ ಭವಿಷ್ಯ ನಿರ್ಮಿಸುವ ನಿಟ್ಟಿನಲ್ಲಿ ಭಾರತದ ಬದ್ಧತೆ ಮತ್ತು ಪ್ರಯತ್ನವನ್ನು ಶ್ಲಾಘಿಸಿದ್ದಾರೆ. 2030ಕ್ಕೂ ಮೊದಲೇ ಶೇ.50ರಷ್ಟು ಪಳೆಯುಳಿಕೆಯೇತರ ಇಂಧನ ಸ್ಥಾಪಿತ ಸಾಮರ್ಥ್ಯ ಸಾಧಿಸಿರುವುದು ಮಹತ್ವಾಕಾಂಕ್ಷೆ, ನಾವೀನ್ಯತೆ ಮತ್ತು ಸುಸ್ಥಿರ ಅಭಿವೃದ್ಧಿಯ ಬದ್ಧತೆಗೆ ಸಾಕ್ಷಿಯಾಗಿದೆ. 2030ರ ವೇಳೆಗೆ 500 GW ಪಳೆಯುಳಿಕೆಯೇತರ ಸಾಮರ್ಥ್ಯ ಮತ್ತು 2070ರ ವೇಳೆಗೆ ನಿವ್ವಳ-ಶೂನ್ಯ ಹೊರಸೂಸುವಿಕೆಯ ಗುರಿಯತ್ತ ದೇಶ ಮುನ್ನುಗ್ಗುತ್ತಿದ್ದು, ಮುಂದಿನ ಪೀಳಿಗೆಗೆ ಶುಭವಾಗಲಿದೆ ಎಂದು ಆಶಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!