ಉದಯವಾಹಿನಿ, ಸಿಕರ್: ರಾಜಸ್ಥಾನದ ಸಿಕರ್) ಜಿಲ್ಲೆಯ ಆದರ್ಶ ವಿದ್ಯಾ ಮಂದಿರ ಶಾಲೆಯಲ್ಲಿ 9 ವರ್ಷದ ಬಾಲಕಿಯೊಬ್ಬಳು ಊಟದ ಬಾಕ್ಸ್ ತೆರೆಯುತ್ತಿದ್ದ ವೇಳೆ ಹೃದಯಾಘಾತದಿಂದ (Heart Attack) ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 4ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದ ಈ ಬಾಲಕಿ, ಮಂಗಳವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಶಾಲೆಯ ಊಟದ ವಿರಾಮದ ಸಂದರ್ಭದಲ್ಲಿ ಬಾಕ್ಸ್ ಓಪನ್ ಮಾಡುವಾಗ ಘಟನೆ ನಡೆದಿದೆ. ಶಾಲೆಯ ಪ್ರಾಂಶುಪಾಲ ನಂದಕಿಶೋರ್ ಪ್ರಕಾರ, ಎಲ್ಲ ವಿದ್ಯಾರ್ಥಿಗಳು ತರಗತಿಯೊಳಗೆ ಊಟ ಮಾಡುತ್ತಿದ್ದಾಗ, ಬಾಲಕಿ ತನ್ನ ಊಟದ ಡಬ್ಬವನ್ನು ತೆರೆಯುವಾಗ ಆಕಸ್ಮಿಕವಾಗಿ ಪ್ರಜ್ಞೆ ತಪ್ಪಿ ಕುಸಿದುಬಿದ್ದಿದ್ದಾಳೆ.
“ಮಂಗಳವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಘಟನೆ ಸಂಭವಿಸಿತು. ಆಕೆ ಊಟದ ಡಬ್ಬವನ್ನು ಕೈಗೆ ತೆಗೆದುಕೊಂಡಾಗ ಕುಸಿದು, ಆಹಾರ ನೆಲಕ್ಕೆ ಚೆಲ್ಲಿತು. ನಾವೆಲ್ಲರೂ ಶಾಲಾ ಆವರಣದಲ್ಲಿದ್ದೆವು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕೊಂಡುಹೋದ್ವಿ” ಎಂದು ಪ್ರಾಂಶುಪಾಲರು ಹೇಳಿದ್ದಾರೆ. ಶಾಲೆಯಲ್ಲಿ ಮಕ್ಕಳು ಪ್ರಜ್ಞೆ ತಪ್ಪುವುದು ಅಪರೂಪವಲ್ಲ ಎಂದವರು ತಿಳಿಸಿದ್ದಾರೆ.
