ಉದಯವಾಹಿನಿ, ಬೆಂಗಳೂರು: ಸ್ಟುಡಿಯೋಸ್ ಲಾಂಛನದಲ್ಲಿ ಸತ್ಯ ಎಸ್. ಶ್ರೀನಿವಾಸನ್ ನಿರ್ಮಿಸಿರುವ, ರಾ.ಸೂರ್ಯ ನಿರ್ದೇಶನದ ಹಾಗೂ ಶೌರ್ಯ ಪ್ರತಾಪ್, ರಾ.ಸೂರ್ಯ, ಪ್ರಿಯಾಂಕ ಮಳಲಿ ಮುಂತಾದವರು ಅಭಿನಯಿಸಿರುವ ‘ಎಲ್ಟು ಮುತ್ತಾʼ ಚಿತ್ರದ ಟ್ರೇಲರ್ ಇತ್ತೀಚೆಗೆ ವಿಕ್ಟರಿ ಸಿನಿಮಾಸ್‌ನಲ್ಲಿ ಅದ್ದೂರಿಯಾಗಿ ಅನಾವರಣವಾಯಿತು. ಹಿರಿಯ ನಿರ್ಮಾಪಕ ಎಸ್.ಎ. ಚಿನ್ನೇಗೌಡ ಅವರು ಟ್ರೇಲರ್ ಬಿಡುಗಡೆ ಮಾಡಿದರು. ನಟರಾದ ಕಿಶೋರ್ ಕುಮಾರ್, ಮನೋರಂಜನ್ ರವಿಚಂದ್ರನ್, ಜಿ.ಬಿ. ವಿನಯ್ ಕುಮಾರ್ ಹಾಗೂ ಪೊಲೀಸ್ ಅಧಿಕಾರಿ ರಾಜೇಶ್ ಅವರು ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದು, ಚಿತ್ರಕ್ಕೆ ಶುಭ ಕೋರಿದರು. ಸಮಾರಂಭದ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ಮೊದಲು ಮಾತನಾಡಿದ ನಿರ್ಮಾಪಕ ಸತ್ಯ ಶ್ರೀನಿವಾಸನ್, ನಮ್ಮ ಚಿತ್ರದ ಎರಡು ಹಾಡುಗಳು ಹಾಗೂ ಟೀಸರ್‌ಗೆ ದೊರಕಿರುವ ಪ್ರಶಂಸೆಗೆ ಬಹಳ ಖುಷಿಯಾಗಿದೆ. ಅದರಲ್ಲೂ ಕೊಡವ ಭಾಷೆಯ ಹಾಡಂತೂ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಇಂದು ಗಣ್ಯರಿಂದ ಟ್ರೇಲರ್ ಬಿಡುಗಡೆಯಾಗಿದೆ. ಇನ್ನೂ ಪ್ರಚಾರಕ್ಕಾಗಿ ʼಎಲ್ಟು ಮುತ್ತಾʼ ನ ಸಂಚಾರ ಆರಂಭವಾಗಿದ್ದು, ರಾಜ್ಯದ ವಿವಿಧ ಊರುಗಳಿಗೆ ಚಿತ್ರತಂಡ ಭೇಟಿ ಕೊಡಲಿದೆ. ಆಗಸ್ಟ್ 1 ರಂದು ʼಎಲ್ಟು ಮುತ್ತಾʼ ನಮ್ಮ ಚಿತ್ರ ಶ್ರೀಧರ್ ಕೃಪ ಎಂಟರ್‌ಪ್ರೈಸಸ್ ಮೂಲಕ ರಾಜ್ಯದಂತ ಬಿಡುಗಡೆಯಾಗುತ್ತಿದೆ ಎಂದರು.
ಟ್ರೇಲರ್ ಮೂಲಕ ಎಲ್ಲರ ಗಮನ ಸೆಳೆದಿರುವ ನಮ್ಮ ಚಿತ್ರ ಆಗಸ್ಟ್ 1 ರಂದು ಬಿಡುಗಡೆಯಾಗಲಿದೆ. ಈಗಾಗಲೇ ತಿಳಿಸಿದ ಹಾಗೆ ʼಎಲ್ಟು ಮುತ್ತಾʼ ಎರಡು ಪಾತ್ರಗಳ ಹೆಸರು. ಇದು ಸಾವಿಗೆ ಡೋಲು ಬಡೆಯುವವರ ಸುತ್ತ ಹೆಣೆದಿರುವ ಕಥೆ. ಕೊಡಗು ಪ್ರಾಂತ್ಯದಲ್ಲಿ ನಡೆಯುವ ಕಥೆಯೂ ಹೌದು. ಚಿಕ್ಕವಯಸ್ಸಿನಿಂದ ನಾನು ಕಂಡ ಕೆಲವು ಸನ್ನಿವೇಶಗಳನ್ನು ಚಿತ್ರದ ಮೂಲಕ ತರುತ್ತಿದ್ದೇನೆ. ನಿಮಗೂ ಚಿತ್ರ ಹಿಡಸಲಿದೆ ಎಂಬ ಭರವಸೆ ಇದೆ. ನಾನು ನಿರ್ದೇಶನದ ಜತೆಗೆ ಎಲ್ಟು ಪಾತ್ರದಲ್ಲೂ ಅಭಿನಯಿಸಿದ್ದೇನೆ. ಮುತ್ತಾ ಪಾತ್ರದಲ್ಲಿ ಶೌರ್ಯ ಪ್ರತಾಪ್ ನಟಿಸಿದ್ದಾರೆ ಎಂದು ನಿರ್ದೇಶಕ ರಾ ಸೂರ್ಯ ತಿಳಿಸಿದರು.
