ಉದಯವಾಹಿನಿ, ಬೆಂಗಳೂರು: ಕೊಲೆಸ್ಟ್ರಾಲ್, ನಮ್ಮ ದೇಹದ ಎಲ್ಲ ಜೀವಕೋಶಗಳಲ್ಲಿಯೂ ಕಂಡು ಬರುವ ಕೊಬ್ಬಿನಂತಹ ವಸ್ತು. ಇದು ಲಿಪೊಪ್ರೋಟೀನು ಗಳೆಂಬ ಸಣ್ಣ ಸಣ್ಣ ಪ್ಯಾಕ್‌ಗಳಲ್ಲಿ ದೇಹದಾದ್ಯಂತ ಚಲಿಸುತ್ತದೆ. ಲಿಪೊಪ್ರೋಟೀನ್‌ಗಳಲ್ಲಿ ಮೂರು ವಿಧ: ಎಲ್.ಡಿ.ಎಲ್. ಅಥವಾ ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್; ಎಚ್.ಡಿ.ಎಲ್. ಅಥವಾ ಹೆಚ್ಚಿನ ಸಾಂದ್ರತೆಯ ಕೊಲೆಸ್ಟ್ರಾಲ್ ಅಥವಾ ಉತ್ತಮ ಕೊಲೆಸ್ಟ್ರಾಲ್; ಮತ್ತು ಟ್ರೈಗ್ಲಿಸರೈಡ್‌ಗಳು. ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿದ್ದರೆ ಹೃದಯ ಸಮಸ್ಯೆಗಳು ಮತ್ತು ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ.
ಸಾಮಾನ್ಯವಾಗಿ, ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿರುವುದಕ್ಕೂ ವಯಸ್ಸಿಗೂ ಸಂಬಂಧವಿರುತ್ತದೆ. ಆದರೂ, 30ರ ಹರೆಯದವರಲ್ಲೂ, 20ರ ಹರೆಯದವರಲ್ಲೂ ಕೆಲವರಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿರುವುದು ರೋಗನಿರ್ಣಯದಲ್ಲಿ ಪತ್ತೆಯಾಗಿದೆ. ಅಧಿಕವಾಗಿರುವ ಕೊಲೆಸ್ಟ್ರಾಲ್, ನಿಶ್ಶಬ್ದ ಕೊಲೆಗಾರ. ಏಕೆಂದರೆ ಇದು ಯಾವುದೇ ರೋಗಲಕ್ಷಣಗಳನ್ನು ಅಥವಾ ಯಾವುದೇ ಲಕ್ಷಣಗಳನ್ನು ಪ್ರದರ್ಶಿಸುವುದಿಲ್ಲ. ಹಾಗಾಗಿ ಪತ್ತೆಯಾಗದೆ ಮುಂದುವರಿಯುತ್ತದೆ. ಮಾರಕವಾಗುವ ಮೊದಲು ಕೊಲೆಸ್ಟ್ರಾಲ್ ಮಟ್ಟವನ್ನು ಸರಿಪಡಿಸಿಕೊಳ್ಳಲು ತಕ್ಷಣವೇ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳು ವುದು ಬಹಳ ಮುಖ್ಯ.
ಆದರೆ, ಲಿಪಿಡ್‌ಗಳೆಲ್ಲವೂ ದೇಹಕ್ಕೆ ಕೆಟ್ಟದ್ದಲ್ಲ. ಎಲ್.ಡಿ.ಎಲ್. ಕೆಟ್ಟದ್ದು ಏಕೆಂದರೆ, ಅದು ನಮ್ಮ ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಶೇಖರಣೆಗೆ ಕಾರಣವಾಗುತ್ತದೆ. ಇದು ಪ್ಲೇಕ್ ನಿರ್ಮಾಣಕ್ಕೆ ಕಾರಣವಾಗಬಹುದು ಮತ್ತು ಅಂತಿಮವಾಗಿ ರಕ್ತಸಂಚಲನೆಗೆ ಅಡಚಣೆಯನ್ನು ಉಂಟುಮಾಡಿ ಅಂತಿಮವಾಗಿ ಹೃದಯಾಘಾತ ಅಥವಾ ಪಾರ್ಶ್ವವಾಯುವಿಗೆ ಕಾರಣವಾಗಬಹುದು. ಎಚ್.ಡಿ.ಎಲ್. ಅಥವಾ ಹೆಚ್ಚಿನ ಸಾಂದ್ರತೆಯ ಲಿಪೊಪ್ರೋಟೀನ್, ದೇಹಕ್ಕೆ ಒಳ್ಳೆಯದು. ಏಕೆಂದರೆ, ಇದು ದೇಹದ ಇತರ ಭಾಗಗಳಿಂದ ಕೊಲೆಸ್ಟ್ರಾಲನ್ನು ಯಕೃತ್ತಿಗೆ (ಲಿವರ್ ಗೆ) ಹಿಂತಿರುಗಿಸುತ್ತದೆ. ಇದು, ರಕ್ತದಿಂದ ಕೊಲೆಸ್ಟ್ರಾಲನ್ನು ತೆಗೆದುಹಾಕುತ್ತದೆ. ಟ್ರೈಗ್ಲಿಸರೈಡ್‌ಗಳು ದೇಹಕ್ಕೆ ಕೆಟ್ಟವು; ಅವು ನಿಮ್ಮ ದೇಹದಲ್ಲಿ ಸಂಗ್ರಹವಾಗಿರುವ ಒಂದು ರೀತಿಯ ಕೊಬ್ಬಿನಂಶವಾಗಿದ್ದು ಶಕ್ತಿಯ ಒಂದು ಮೂಲವಾಗಿದೆ.
