ಉದಯವಾಹಿನಿ, ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಶುರುವಾದ್ರೆ ಸಾಕು ಎಲ್ಲಿ, ಯಾವಾಗ, ಯಾವ ಬೆಟ್ಟ ಕುಸಿಯುತ್ತದೆಯೋ? ಎನ್ನುವ ಆತಂಕ ಶುರುವಾಗಿ ಬಿಡುತ್ತದೆ. ಇದರ ನಡುವೆ ಮಡಿಕೇರಿ ತಾಲೂಕಿನ ಮೇಕೇರಿ ಗ್ರಾಮದ ಬೆಟ್ಟದ ನಿವಾಸಿಗಳಿಗೆ ಭೂಕುಸಿತ ಉಂಟಾಗುವ ಅತಂಕ ಎದುರಾಗಿದ್ರೂ ಬೆಟ್ಟದಲ್ಲಿಯೇ ಬದುಕು ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಡಿಕೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ 2-3 ದಿನಗಳಿಂದ ನಿರಂತರ ಮಳೆಯಾಗುತ್ತಿರೋದ್ರಿಂದ ಮೇಕೇರಿ ಗ್ರಾಮದಲ್ಲಿ ನವಗ್ರಾಮ ಹಾಗೂ ಶಕ್ತಿ ನಗರದಲ್ಲಿ ಭೂಕುಸಿತದ ಅತಂಕ ಮನೆ ಮಾಡಿದೆ. ಈ ವ್ಯಾಪ್ತಿಯ ಬೆಟ್ಟದ ತಪ್ಪಲಿನಲ್ಲಿರುವ ಸುಮಾರು 13 ಮನೆಗಳು ಅಪಾಯದ ಅಂಚಿನಲ್ಲಿದ್ದು ಕೆಲ ಮನೆಗಳ ಹಿಂಭಾಗದ ನೆಲ ಬಿರುಕು ಬಿಟ್ಟಿದೆ. ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೆಟ್ಟದ ಮೇಲಿರುವ ಮನೆಗಳ ಹಿಂಬದಿಯ ಗುಡ್ಡಗಳು ಜರುಗುತ್ತಿದೆ.
ಇದೀಗ ಮಳೆ ಹೆಚ್ಚಾದ ಹಿನ್ನೆಲೆ ನೆಲ ಕೂಡ ಬಿರುಕುಬಿಟ್ಟಿದೆ. ಇನ್ನೂ ಬೆಟ್ಟದಲ್ಲಿ ಭೂಕುಸಿತದ ಭೀತಿ ಇರುವುದರಿಂದ ಈಗಾಗಲೇ ಅಲ್ಲಿನ ಮೂರು ಮನೆಗಳಿಗೆ ತೆರಳಲು ಇದ್ದ ಸಣ್ಣ ಕಾಲು ದಾರಿ ಕೂಡ ಮುಚ್ಚಿಹೋಗಿದೆ. ಮುಂಜಾಗ್ರತಾ ಕ್ರಮವಾಗಿ 3 ಕುಟುಂಬಗಳೂ ಸದ್ಯ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಈ ಬೆಟ್ಟದ ತಪ್ಪಲಿನಲ್ಲಿ ವಾಸಿಸುತ್ತಿರುವ ಹತ್ತಾರು ಕುಟುಂಬಗಳು 2018 ರಿಂದಲ್ಲೇ ಬೆಟ್ಟದ ಮೇಲೆ ಆತಂಕ ನಡುವೆ ಜೀವನ ಸಾಗಿಸುತ್ತಿದ್ದಾರೆ. ಈ ನಡುವೆ ಕಳೆದ ವರ್ಷದಿಂದ ಈ ವರ್ಷದ ಮಳೆಗಾಲದಿಂದ ಹಲವೆಡೆ ಚಿಕ್ಕಪುಟ್ಟ ಭೂಕುಸಿತಗಳು ಆಗಿವೆ. ಹೀಗಾಗಿ ಇಲ್ಲಿನ ಜನರು ನಿತ್ಯ ಭಯದಲ್ಲೇ ಜೀವನ ನಡೆಸುತ್ತಿದ್ದಾರೆ.
