ಉದಯವಾಹಿನಿ, ಮಂಡ್ಯ: ಎಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿಯ ಕಬಿನಿ ಜಲಾಶಯಕ್ಕೆ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು‌ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಾಗಿನ ಅರ್ಪಿಸಿದರು.ಮುಂಗಾರಿನಲ್ಲಿ ರಾಜ್ಯದಲ್ಲೇ ಮೊದಲು ತುಂಬುವ ಜಲಾಶಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಕಳೆದ ಜೂನ್ ಮೊದಲ ವಾರದಲ್ಲೇ ತುಂಬಿತ್ತು. ಅಣೆಕಟ್ಟೆಯ ಗರಿಷ್ಠ ಮಟ್ಟ 2,284 ಅಡಿ ಇದ್ದು, ಇಂದಿನ ಮಟ್ಟ 2,283.33 ಅಡಿ ಇತ್ತು. 15 ಸಾವಿರ ಕ್ಯೂಸೆಕ್ ಒಳಹರಿವಿತ್ತು. ಅಣೆಕಟ್ಟೆಯ ಕಾವಲು ಗೋಪುರದ ಬಳಿ ಬೆಳಿಗ್ಗೆ 11.15ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಿನ ಅರ್ಪಿಸಿ, 32.25 ಕೋಟಿ ರು. ವೆಚ್ಚದ ಅಣೆಕಟ್ಟೆ ಪುನಶ್ಚೇತನ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು.ಕಪಿಲಾ ನದಿಯು ಕಾವೇರಿಯ ಪ್ರಮುಖ ಉಪನದಿಯಾಗಿದ್ದು, 1.13 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಒದಗಿಸುತ್ತದೆ. ಪ್ರತಿ ವರ್ಷದಂತೆ ಜಲಾಶಯ ತುಂಬಿದಾಗ ಬಾಗಿನ ಅರ್ಪಿಸಲಾಗಿದ್ದು, ರೈತರಿಗೆ ಒಳ್ಳೆಯದಾಗಲೆಂದು ಕಪಿಲಾ ಮಾತೆಗೆ ಪ್ರಾರ್ಥಿಸಲಾಗಿದೆ‌. ಜಲಾಶಯದ ಎದುರು ಬೃಂದಾವನ ಮಾದರಿಯಲ್ಲಿ ಅಭಿವೃದ್ಧಿ ಮಾಡಲಾಗುವುದು ಎಂದರು.ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ. ಕೇಂದ್ರ ಸರ್ಕಾರ ಅನುಮತಿ ನೀಡಿದರೆ, ಸಮಾನಾಂತರ ಜಲಾಶಯ ನಿರ್ಮಿಸಲಾಗುವುದು. ಗೋವಾ ಹಾಗೂ ಕೇಂದ್ರದಲ್ಲಿ ಬಿಜೆಪಿಯವರದ್ದೇ ಸರ್ಕಾರವಿದೆ. ಮಹಾದಾಯಿ ಮತ್ತು ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಲಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಇಂದು ಮೈಸೂರಿನ ಹೆಗ್ಗಡದೇವನಕೋಟೆ ಬಳಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ, ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಿದೆ. ಪ್ರತಿ ಬಾರಿಯು ಸಮೃದ್ಧ ಮಳೆಯಾಗಿ ಕಾವೇರಿ ನದಿ ಮೈದುಂಬಿ ಹರಿಯಲಿ, ಜಲಾಶಯಗಳ‌ ಒಡಲು ತುಂಬಿ ರೈತರು ಬಾಳ ಹಸನಾಗಲಿ‌ ಎಂದು ಪ್ರಾರ್ಥಿಸಿದೆ.

Leave a Reply

Your email address will not be published. Required fields are marked *

error: Content is protected !!