ಉದಯವಾಹಿನಿ, ಹೊಸದಿಲ್ಲಿ: ಒಡಿಶಾದಲ್ಲಿ ನಡೆದ ಭೀಕರ ರೈಲು ಅಪಘಾತದ ಬಳಿಕ ಬಾಲಸೋರ್‌ನ ಸೋರೋ ಸೆಕ್ಷನ್ ಸಿಗ್ನಲ್ ಜೂನಿಯರ್ ಎಂಜಿನಿಯರ್ ತಲೆಮರೆಸಿಕೊಂಡಿದ್ದು, ಅವರ ಮನೆಯನ್ನು ಸಿಬಿಐ ಸೀಲ್ ಮಾಡಿದೆ ಎಂದು ಕೆಲವು ವರದಿಗಳು ಹೇಳಿವೆ. ಆದರೆ ಇದನ್ನು ರೈಲ್ವೆ ಅಲ್ಲಗಳೆದಿದೆ. “ಬಹನಗಾ ಸಿಬ್ಬಂದಿ ತಲೆಮರೆಸಿಕೊಂಡಿದ್ದು, ನಾಪತ್ತೆಯಾಗಿದ್ದಾರೆ ಎಂದು ಕೆಲವು ಮಾಧ್ಯಮ ವರದಿಗಳು ಹೇಳುತ್ತಿವೆ. ಇದು ವಾಸ್ತವವಲ್ಲ, ಸುಳ್ಳು ಸುದ್ದಿ. ಇಡೀ ಸಿಬ್ಬಂದಿ ವರ್ಗ ಹಾಜರಿದೆ ಮತ್ತು ತನಿಖೆಯ ಭಾಗವಾಗಿದೆ. ಅವರು ಸಂಸ್ಥೆ ಮುಂದೆ ಹಾಜರಾಗುತ್ತಿದ್ದಾರೆ” ಎಂದು ಆಗ್ನೇಯ ರೈಲ್ವೆ ಸಿಪಿಆರ್‌ಒ ಆದಿತ್ಯ ಕುಮಾರ್ ಚೌಧರಿ ಹೇಳಿದ್ದಾರೆ. ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಎಂಜಿನಿಯರ್‌ನನ್ನು ತನಿಖಾ ಸಂಸ್ಥೆ ವಿಚಾರಣೆಗೆ ಒಳಪಡಿಸಿತ್ತು. ಆದರೆ ಈಗ ಅವರು ಕುಟುಂಬ ಸಮೇತ ನಾಪತ್ತೆಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಆರಂಭಿಕ ತನಿಖೆ ಸಂದರ್ಭದಲ್ಲಿ ಎಂಜಿನಿಯರ್‌ನನ್ನು ಸಿಬಿಐ ಅಜ್ಞಾನ ಸ್ಥಳದಲ್ಲಿ ವಿಚಾರಣೆಗೆ ಒಳಪಡಿಸಿತ್ತು. ಜೂನ್ 16ರಂದು ಬಾಲಸೋರ್‌ಗೆ ಭೇಟಿ ನೀಡಿದ ನಂತರ ಸಿಬಿಐ ತಂಡವು ಸೋಮವಾರ ಮರಳಿದ್ದು, ಎಂಜಿನಿಯರ್ ವಾಸವಿದ್ದ ನಿವಾಸವನ್ನು ಸೀಲ್ ಮಾಡಿದೆ. ಆದರೆ ಅವರು ಮನೆಯಲ್ಲಿ ಎಲ್ಲಿಯೂ ಕಾಣಿಸಲಿಲ್ಲ ಎಂದು ವರದಿಗಳು ಹೇಳಿವೆ.
