ಉದಯವಾಹಿನಿ, ಹುಬ್ಬಳ್ಳಿ: ಎಲ್ಲಾ ಚುನಾಯಿತ ಶಾಸಕರಿಗೆ ಕ್ಷೇತ್ರದ ಅಭಿವೃದ್ಧಿಗಾಗಿ ವಿಶೇಷ ಅನುದಾನ ನೀಡಲು ನಿರ್ಧರಿಸಲಾಗಿದೆ. ಒಟ್ಟು 7,450 ಕೋಟಿ ರೂ. ಅನುದಾನ ನೀಡಲು ತೀರ್ಮಾನ ಮಾಡಲಾಗಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಮಾಹಿತಿ ನೀಡಿದರು.
ಈ ಕುರಿತು ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಮೊದಲು 224 ಶಾಸಕರಿಗೆ ತಲಾ 50 ಕೋಟಿ ರೂ. ಅನುದಾನ ನೀಡಲು ಸಿಎಂ ತೀರ್ಮಾನ ಮಾಡಿದ್ದರು, ಆದರೆ ಇದಕ್ಕೆ 11.5 ಸಾವಿರ ಕೋಟಿ ರೂ. ಬೇಕಿತ್ತು. ಹೀಗಾಗಿ ಇದರಲ್ಲಿ ಕೆಲವೊಂದು ಬದಲಾವಣೆ ಮಾಡಿ 8 ಸಾವಿರ ಕೋಟಿ ರೂ. ಅನುದಾನ ನೀಡಲು ನಿರ್ಧರಿಸಿದ್ದಾರೆ. ಈ ಕುರಿತು ವಿಪಕ್ಷದವರು ಅನುದಾನಕ್ಕಾಗಿ ರಣದೀಪ್ ಸುರ್ಜೆವಾಲಾ ಅವರು ಹಣ ಕೊಡುತ್ತಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು. ಇದೀಗ ನಾನು ಹಾಗೂ ಮುಖ್ಯಮಂತ್ರಿಗಳು ಸೇರಿ ಈ ನಿರ್ಧಾರಕ್ಕೆ ಬಂದಿದ್ದೇವೆ. ಈ ಮೂಲಕ ರಾಜ್ಯದಲ್ಲಿ ಅನುದಾನದ ಕೊರತೆ ಇಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತಿದ್ದೇವೆ. ಆದರೆ ವಿಜಯೇಂದ್ರ, ಆರ್.ಅಶೋಕ್, ನಾರಾಯಣಸ್ವಾಮಿ ಚಿಲ್ಲರೆ ಟೀಕೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಸದ್ಯ 224 ಶಾಸಕರುಗಳ ಪೈಕಿ ವಿಪಕ್ಷ ಹಾಗೂ ಕಲ್ಯಾಣ ಕರ್ನಾಟಕ ಶಾಸಕರುಗಳಿಗೆ ತಲಾ 25 ಕೋಟಿ ರೂ., ಇನ್ನುಳಿದ ಕಾಂಗ್ರೆಸ್ ಶಾಸಕರುಗಳಿಗೆ ತಲಾ 50 ಕೋಟಿ ರೂ. ಅನುದಾನ ಸಿಗಲಿದೆ. ಇನ್ನೂ ಬಿಬಿಎಂಪಿ ವ್ಯಾಪ್ತಿಯ ಶಾಸಕರುಗಳಿಗೆ ಬಿಬಿಎಂಪಿಯಿಂದ ಸಿಗುವ ವಿಶೇಷ ಅನುದಾನದಲ್ಲಿಯೇ ಮತ್ತೊಂದು ಅನುದಾನ ನೀಡಲು ತೀರ್ಮಾನ ಮಾಡಲಾಗಿದೆ.
