ಉದಯವಾಹಿನಿ, ಶಿವಕಾಶಿ: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಉಂಟಾಗಿ ಮೂವರು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ವಿರುಧುನಗರ ಜಿಲ್ಲೆಯ ಶಿವಕಾಶಿ ( ಬಳಿಯ ನಾರಣಾಪುರಂನಲ್ಲಿ ನಡೆದಿದೆ. ಮರಿಯಮ್ಮಲ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದೆ. ಹಲವಾರು ಮಂದಿ ಇದರಿಂದ ಗಾಯಗೊಂಡಿದ್ದಾರೆ. ಸ್ಫೋಟಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಮಾಹಿತಿ ತಿಳಿದ ತಕ್ಷಣ ರಕ್ಷಣಾ ತಂಡಗಳು ಮತ್ತು ಅಗ್ನಿಶಾಮಕ ತಂಡ ಸ್ಥಳಕ್ಕೆ ಧಾವಿಸಿ ತುರ್ತು ಕ್ರಮ ಕೈಗೊಂಡಿತ್ತು. ಇದರಿಂದ ಹೆಚ್ಚಿನ ಅಪಾಯ ತಪ್ಪಿದಂತಾಗಿದೆ. ಸ್ಪೋಟದ ಕಾರಣದ ಕುರಿತು ತನಿಖೆ ನಡೆಸುತ್ತಿರುವುದಾಗಿ ನಾರಣಾಪುರಂ ವ್ಯಾಪ್ತಿಯ ಪೊಲೀಸರು ತಿಳಿಸಿದ್ದಾರೆ.
ಭಾರತದ ಪಟಾಕಿ ರಾಜಧಾನಿ ಎಂದೇ ಕರೆಯಲ್ಪಡುವ ಶಿವಕಾಶಿ ಬೆಂಕಿಕಡ್ಡಿ ಉದ್ಯಮ ಮತ್ತು ಮುದ್ರಣದ ಪ್ರಮುಖ ಕೇಂದ್ರವಾಗಿದೆ. ಇಲ್ಲಿನ ನಾರಣಾಪುರಂನ ಮರಿಯಮ್ಮಲ್ ಪಟಾಕಿ ಕಾರ್ಖಾನೆಯಲ್ಲಿ ಸೋಮವಾರ ಸ್ಫೋಟ ಉಂಟಾಗಿದೆ. ಹತ್ತಿರದ ಪ್ರದೇಶಗಳನ್ನು ನಡುಗಿಸುವ ರೀತಿಯಲ್ಲಿ ಭಾರಿ ಪ್ರಮಾಣದ ದೊಡ್ಡ ಸ್ಫೋಟದ ಶಬ್ದ ಕೇಳಿಬಂದಿದೆ. ಇದು ಭೀತಿಯನ್ನು ಉಂಟು ಮಾಡಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ವಿರುಧುನಗರ ಜಿಲ್ಲೆಯ ಚಿನ್ನ ಕಾಮನ್‌ಪಟ್ಟಿ ಗ್ರಾಮದಲ್ಲಿರುವ ಪಟಾಕಿ ತಯಾರಿಕಾ ಘಟಕದಲ್ಲಿ ಜುಲೈ 1ರಂದು ಸಂಭವಿಸಿದ ಸ್ಫೋಟದಲ್ಲಿ ಎಂಟು ಜನರು ಸಾವನ್ನಪ್ಪಿದ್ದು, ಹಲವು ಮಂದಿ ಗಾಯಗೊಂಡಿದ್ದರು. ಈ ಸ್ಫೋಟದ ಪರಿಣಾಮವಾಗಿ ಕಾರ್ಖಾನೆಯ ಒಳಗಿನಿಂದ ನಿರಂತರವಾಗಿ ಪಟಾಕಿ ಸಿಡಿತದ ಸದ್ದು ಕೇಳಿಬರುತ್ತಿತ್ತು ಎನ್ನಲಾಗಿದೆ.
