ಉದಯವಾಹಿನಿ, ಬೆಂಗಳೂರು : ರಿಷಬ್ ಶೆಟ್ಟಿ ನಾಯಕನಾಗಿ ನಟಿಸಿ ನಿರ್ದೇಶಿಸಿರುವ ‘ಕಾಂತಾರ ಅಧ್ಯಾಯ 1’ ಶೂಟಿಂಗ್‌ ಮುಕ್ತಾಯಗೊಂಡಿದ್ದು, ಆ.2ರಂದು ವಿಶ್ವಾದ್ಯಂತ ಚಿತ್ರ ಬಿಡುಗಡೆಗೊಳ್ಳಲಿದೆ. ಚಿತ್ರದ ಮೇಕಿಂಗ್‌ ವೀಡಿಯೋ ಬಿಡುಗಡೆಯಾಗಿದ್ದು, 2.06 ನಿಮಿಷಗಳ ವೀಡಿಯೋಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. 20 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.ಈ ಮೂಲಕ ಸಿನಿಮಾ ಚಿತ್ರೀಕರಣ ಮುಗಿದಿರುವುದಾಗಿ ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ. ಬಹುಭಾಷೆಗಳಲ್ಲಿ ಬಿಡುಗಡೆಯಾಗಿರುವ ಈ ವಿಡಿಯೋದಲ್ಲಿ ಕಾಂತಾರ ಜಗತ್ತಿನ ಅಗಾಧತೆ ಕಟ್ಟಿಕೊಡಲಾಗಿದೆ. ಕಾಂತಾರ ಚಿತ್ರದ ಸೆಟ್‌ಗಳ ವೈಭವವನ್ನು, ಸಾವಿರಾರು ಮಂದಿಗಳ ಶ್ರಮವನ್ನು, ಅಪರೂಪದ ಚಿತ್ರೀಕರಣ ತಾಣಗಳ ಸಣ್ಣ ಪರಿಚಯವನ್ನು ಈ ವಿಡಿಯೋದಲ್ಲಿ ನೀಡಲಾಗಿದೆ.
ಹಿನ್ನೆಲೆ ಧ್ವನಿಯಲ್ಲಿ ಈ ಸಿನಿಮಾ ಮೇಕಿಂಗ್‌ ಬಗ್ಗೆ ವಿವರಿಸಿರುವ ರಿಷಬ್‌ ಶೆಟ್ಟಿ, ‘ನನ್ನ ನೆಲದ ಕಥೆಯನ್ನು ಇಡೀ ಪ್ರಪಂಚಕ್ಕೆ ಹೇಳಬೇಕು ಅಂತ ನನ್ನದೊಂದು ಕನಸು. ನಮ್ಮ ಊರು, ನಮ್ಮ ಜನ, ನಮ್ಮ ನಂಬಿಕೆಗಳು. ನಾನು ಆ ಕನಸಿನ ಬೆನ್ನು ಹತ್ತುವುದಕ್ಕೆ ಶುರು ಮಾಡಿದಾಗ ಸಾವಿರಾರು ಜನ ನನ್ನ ಬೆನ್ನ ಹಿಂದೆ ನಿಂತರು. 3 ವರ್ಷಗಳ ಪರಿಶ್ರಮ, 250 ದಿನಗಳ ಚಿತ್ರೀಕರಣ. ಎಷ್ಟೇ ಕಷ್ಟ ಬಂದರೂ ನಾನು ನಂಬಿದ ದೈವ ನನ್ನ ಕೈ ಬಿಡಲಿಲ್ಲ. ನನ್ನ ಇಡೀ ತಂಡ, ನನ್ನ ನಿರ್ಮಾಪಕರು ನನ್ನ ಬೆನ್ನ ಹಿಂದೆ ನಿಂತಿದ್ದರು. ಪ್ರತಿದಿನ ಸೆಟ್​ನಲ್ಲಿ ಸಾವಿರಾರು ಜನರನ್ನು ನೋಡುತ್ತಿದ್ದಾಗ ನನಗೆ ಕಾಡುತ್ತಿದ್ದ ವಿಷಯ ಒಂದೇ. ಇದು ಕೇವಲ ಸಿನಿಮಾ ಅಲ್ಲ, ಇದೊಂದು ಶಕ್ತಿ. ಕಾಂತಾರದ ಪ್ರಪಂಚಕ್ಕೆ ನಿಮ್ಮೆಲ್ಲರಿಗೂ ಸ್ವಾಗತ’ ಎಂದಿದ್ದಾರೆ. ಭಾರತೀಯ ಕತೆಯನ್ನು ಪ್ರಪಂಚಕ್ಕೆ ಹೇಳಲಿರುವ ಪ್ರಯತ್ನ ಎಂದು ಚಿತ್ರತಂಡ ತಿಳಿಸಿದೆ. ನಿರ್ಮಾಪಕ ವಿಜಯ್‌ ಕಿರಗಂದೂರು ಅವರು, ‘ಇಷ್ಟು ದೊಡ್ಡ ಪ್ರಯತ್ನವನ್ನು ನಾವು ಇದೇ ಮೊದಲ ಬಾರಿಗೆ ಮಾಡುತ್ತಿದ್ದೇವೆ’ ಎಂದು ತಿಳಿಸಿದ್ದಾರೆ. ಅ.2 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿರುವ ಈ ಸಿನಿಮಾ, ಕನ್ನಡ, ಹಿಂದಿ, ತೆಲುಗು, ಮಲಯಾಳಂ, ತಮಿಳು, ಬೆಂಗಾಲಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ತೆರೆ ಕಾಣಲಿದೆ. ಸಿನಿಮಾದ ಮೇಕಿಂಗ್‌ ವೀಡಿಯೋ ನೋಡಿದ ಸಿನಿಮಾ ತಜ್ಞರು ಈ ಸಿನಿಮಾ ಬಿಸಿನೆಸ್‌ ವಿಚಾರದಲ್ಲಿ ಎಲ್ಲಾ ದಾಖಲೆ ಮುರಿಯುವ ಸಾಧ್ಯತೆ ಎನ್ನುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!