ಉದಯವಾಹಿನಿ, ನವದೆಹಲಿ: ಅರವತ್ತಕ್ಕೆ ಅರುಳು-ಮರುಳು ಎಂಬ ಮಾತಿದೆ. ಆದರೆ ಹಾಗೇನು ಆಗಲೇಬೇಕೆಂದು ನಿಯಮವಿಲ್ಲ. ಎಂಬತ್ತರಲ್ಲೂ ನೆನಪು ಚುರುಕಾಗಿರುವವರು ಎಷ್ಟೋ ಮಂದಿ ಇದ್ದಾರಲ್ಲವೇ? ಯಾವುದನ್ನು ನಾವು ಸರಿಯಾಗಿ ಬಳಸುವುದಿಲ್ಲವೋ ಅವೆಲ್ಲವೂ ಜಡವಾಗಿ, ನಶಿಸುವುದು ಸೃಷ್ಟಿಯ ನಿಯಮ. ಹಾಗೆಯೇ ಮೆದುಳಿನ ಉಪಯೋಗವೂ ಸರಿಯಾಗಿ ಆಗದಿದ್ದರೆ ಅರುಳು ಮರುಳು ಸಾಮಾನ್ಯ. ಏನು ಉಪಯೋಗವೆಂದರೆ? ಸದಾ ಯೋಚನೆ, ಚಿಂತೆ, ಒತ್ತಡದಲ್ಲಿ ಒದ್ದಾಡುವುದು ಅಥವಾ ಇನ್ನೇನೋ ಮಾಡುವುದೆಂದೇ? ನಮ್ಮ ದೇಹಕ್ಕೆ ವಯಸ್ಸಾಗಿ ಕ್ಷಮತೆ ಕುಗ್ಗಿದಂತೆ ಮೆದು ಳಿಗೂ ವಯಸ್ಸಾಗುತ್ತದಲ್ಲ, ಏನು ಮಾಡುವುದು? ವಿಶ್ವ ಮೆದುಳು ದಿನ (World Brain Day) ಎಂದು ಜುಲೈ 22 ಅನ್ನು ಗುರುತಿಸಲಾಗಿದ್ದರೂ, ನಾವು ಬದುಕಿರುವಷ್ಟು ದಿನವೂ ಮೆದುಳು ದಿನವೇ! ಆದರೂ ದೇಹದ ಈ ಮಹತ್ವದ ಅಂಗದ ದೇಖರೇಖಿ ಸರಿಯಾಗಿ ಮಾಡಿ ಎಂದು ನೆನಪಿಸಲು ನೆಪಕ್ಕೊಂದು ದಿನ.

ನಮಗೆ ವಯಸ್ಸಾದಂತೆ ಮೆದುಳಿನ ಗಾತ್ರ ಕುಗ್ಗುವುದು ನಿಜ. ಇರುವಷ್ಟರಲ್ಲೇ ಅದಕ್ಕೆ ಸರಿಯಾಗಿ ಕೆಲಸ ಕೊಡದಿದ್ದರೆ ಡಿಮೆನ್ಶಿಯಾ ಇಲ್ಲವೇ ಅಲ್‌ಜೈಮರ್ಸ್‌ನಂಥ ಹಲವು ರೀತಿಯ ರೋಗಗಳು ಅಮರಿಕೊಳ್ಳುತ್ತವೆ. ಮೆದುಳಿನ ಕ್ಷಮತೆ ಕುಗ್ಗಿದಂತೆ ದೇಹ ಇನ್ನಷ್ಟು ಕ್ಷಯಿಸುತ್ತದೆ. ಹಾಗಾಗಿ ಮೆದುಳನ್ನು ಪೋಷಿಸುವ ಆಹಾರಗಳ ಮೂಲಕ, ವ್ಯಾಯಾಮ, ಹೊಸದನ್ನು ಕಲಿಯುವುದು, ಸ್ನೇಹಿತರ ಸಂಪರ್ಕ ಮತ್ತು ಕ್ರಿಯಾಶೀಲವಾದ ಬದುಕಿನ ಮೂಲಕ ನಮ್ಮನ್ನು ನಾವು ಆರೋಗ್ಯ ಪೂರ್ಣವಾಗಿ ಇರಿಸಿಕೊಳ್ಳಲು ಸಾಧ್ಯವಿದೆ. ಹಾಗಾದರೆ ಏನು ಮಾಡಬಹುದು?
ನೆನಪು ಮತ್ತು ಆಲೋಚನೆಗಳನ್ನು ನಿರ್ವಹಿಸುವ ಮೆದುಳಿನ ಭಾಗವು ಕುಗ್ಗದಂತೆ ಕಾಪಾಡಿಕೊಳ್ಳಲು ವ್ಯಾಯಾಮಗಳಿಂದ ಸಾಧ್ಯವಿದೆ ಎನ್ನುತ್ತಾರೆ ತಜ್ಞರು. ಈಜು, ಸೈಕಲ್‌ ಹೊಡೆ ಯುವುದು, ಜಾಗಿಂಗ್‌, ನೃತ್ಯದಂಥ ಏರೋಬಿಕ್‌ ಚಟುವಟಿಕೆಗಳು ಮೆದುಳಿಗೆ ಮರೆವಿನ ತೆರೆ ಮುಚ್ಚದಂತೆ ಕಾಪಾಡುತ್ತವೆ. ಮಾತ್ರವಲ್ಲ ಈ ವ್ಯಾಯಾಮಗಳಿಂದ ಒತ್ತಡ, ಖಿನ್ನತೆಗಳನ್ನು ಯಾವುದೇ ಔಷಧಿಗಳ ನೆರವಿಲ್ಲದೆಯೇ ಕ್ರಮೇಣ ದೂರ ಮಾಡಬಹುದು. ರಕ್ತದೊತ್ತಡ, ಮಧುಮೇಹ ಮತ್ತು ಕೊಲೆಸ್ಟ್ರಾಲ್‌ ಮಟ್ಟಗಳನ್ನು ವ್ಯಾಯಾಮದ ಮೂಲಕ ನಿಯಂತ್ರಿಸಲು ಸಾಧ್ಯವಿದ್ದು, ಇದರಿಂದ ಮೆದುಳಿನ ಆರೋಗ್ಯವೂ ಹೆಚ್ಚುತ್ತದೆ. ಜತೆಗೆ ಶರೀರದ ಚೈತನ್ಯವೂ ಹೆಚ್ಚಿ, ನಿದ್ದೆ ಸುಸೂತ್ರವಾಗಿ ದೇಹ ಮತ್ತು ಮನಸ್ಸುಗಳ ಒಟ್ಟಾರೆ ಸ್ವಾಸ್ಥ್ಯ ವೃದ್ಧಿಸುತ್ತದೆ.

Leave a Reply

Your email address will not be published. Required fields are marked *

error: Content is protected !!