ಉದಯವಾಹಿನಿ, ಉಡುಪಿ: ಸಮಾಜದಲ್ಲಿ ಮಂಗಳಮುಖಿಯರನ್ನು ಬೇರೆಯದೇ ದೃಷ್ಟಿಯಲ್ಲಿ ನೋಡಲಾಗುತ್ತದೆ. ಅವರಿಗೆ ಇಂದಿಗೂ ಕೂಡ ಇತರರಂತೆ ಗೌರವ, ಮನ್ನಣೆ ಸಿಗುತ್ತಿಲ್ಲ. ಆದರೆ, ಅವಮಾನ, ತಾತ್ಸಾರ ಭಾವನೆಗಳ ನಡುವೆಯೂ ಅಲ್ಲಲ್ಲಿ ಮಂಗಳಮುಖಿಯರೂ ಕೂಡ ಎಲ್ಲರಿಗೆ ಸಮಾನವಾಗಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಅಂತವರಲ್ಲಿ ಒಬ್ಬರು ಉಡುಪಿ ಜಿಲ್ಲೆಯ ಈ ಮಂಗಳಮುಖಿ.ಹೌದು, ನಿಮಗೆ ಒಬ್ಬ ವಿಶೇಷ ಮಂಗಳಮುಖಿಯ ಪರಿಚಯ ಮಾಡಿಕೊಡುತ್ತೇವೆ. ಇವರು ಉಡುಪಿ ಜಿಲ್ಲೆಯ ಮಣಿಪಾಲದವರು. ಇತರ ಮಂಗಳಮುಖಿಯರಂತೆ ಬದುಕಲು ಇಷ್ಟಪಡದ ಇವರು, ಎಂ.ಕಾಂ, ಬಿ.ಎಡ್ವರೆಗೆ ಶಿಕ್ಷಣ ಪಡೆದಿದ್ದಾರೆ. ಸಮಾಜದ ಶ್ರೇಷ್ಠ ಕೆಲಸವೆಂದೇ ಪರಿಗಣಿಸಲಾಗುವ ಗುರುವಿನ ವೃತ್ತಿಯನ್ನು ಆಯ್ದುಕೊಂಡಿದ್ದಾರೆ. ಶಿಕ್ಷಕಿಯಾಗಿ ಮಕ್ಕಳಿಗೆ ಅಕ್ಷರ ಪಾಠ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಜಿಲ್ಲೆಯ ಏಕೈಕ ಮಂಗಳಮುಖಿ ಶಿಕ್ಷಕಿ: ಇವರ ಹೆಸರು ಕೃಸ್ಟಿಕಾ. ಉತ್ತಮ ಮಾತುಗಾರ್ತಿಯಾಗಿರುವ ಇವರು ಬಹಳ ಕಷ್ಟಪಟ್ಟು ಈ ಹುದ್ದೆಯನ್ನು ಗಿಟ್ಟಿಸಿಕೊಂಡಿದ್ದಾರೆ. ಸಾಮಾಜಿಕ ತಾರತಮ್ಯದ ಹಿನ್ನೆಲೆಯಲ್ಲಿ, ಇವರಿಗೆ ಹಲವು ಕಡೆ ಕೆಲಸಕ್ಕಾಗಿ ಅಲೆದಾಡಿದರೂ ಎಲ್ಲೆಡೆಯೂ ನಿರಾಕರಣೆ ವ್ಯಕ್ತವಾಗಿತ್ತು. ಬಳಿಕ ಉಡುಪಿ ಜಿಲ್ಲೆಯ ಕಾರ್ಕಳದ ಬೈಲೂರಿನ ಖಾಸಗಿ ಶಾಲೆಯೊಂದರಲ್ಲಿ ಇವರು ಇಂಗ್ಲಿಷ್ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿದ್ದಾರೆ. ಈ ಮೂಲಕ ಉಡುಪಿ ಜಿಲ್ಲೆಯಲ್ಲಿ ಟೀಚರ್ ಕೆಲಸ ಮಾಡುತ್ತಿರುವ ಏಕೈಕ ಲೈಂಗಿಕ ಅಲ್ಪಸಂಖ್ಯಾತೆಯಾಗಿದ್ದಾರೆ. ಪುರುಷನಾಗಿ ಹುಟ್ಟಿದ ಕೃಸ್ಟಿಕಾ, ಬೆಳೆಯುತ್ತಾ ತಾನು ಹೆಣ್ಣೂ ಹೌದು ಎಂದು ಅರಿವಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಉನ್ನತ ವ್ಯಾಸಂಗ ಮಾಡಿ, ತಾನು ಇತರೆ ಮಂಗಳಮುಖಿಯರಂತೆ ಬದುಕದೆ, ಸಮಾಜದ ಮುಖ್ಯವಾಹಿನಿಯ ವೃತ್ತಿ ಮಾಡಬೇಕೆಂಬ ಗುರಿ ಇಟ್ಟುಕೊಂಡರು. ಅದರಂತೆ, ಶ್ರಮಪಟ್ಟು ಶಿಕ್ಷಣ ಪಡೆದ ಅವರು, ತಾವು ಕಂಡ ಕನಸನ್ನು ನನಸಾಗಿಸಿಕೊಂಡಿದ್ದಾರೆ.
ಮಣಿಪಾಲಿನಲ್ಲಿಯೇ ಇವರು ವಾಸಿಸುತ್ತಿದ್ದು, ಅಲ್ಲಿಯೇ ಸಂಪೂರ್ಣ ಶಿಕ್ಷಣ ಪಡೆದಿದ್ದಾರೆ. ಇದೀಗ, ಶಿಕ್ಷಕಿಯಾಗಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಮೂವತ್ತರ ಹರೆಯದ ಕೃಸ್ಟಿಕಾ ಅರಳುಹುರಿದಂತೆ ಮಾತನಾಡುತ್ತಾರೆ. ಉಡುಪಿಯ ಮಣಿಪಾಲದಲ್ಲಿ ಎಲ್ಲರಂತೆಯೇ ವಾಸವಾಗಿ, ಅತ್ಯಂತ ಗೌರವದಿಂದ ಬದುಕುತ್ತಿದ್ದಾರೆ.
