ಉದಯವಾಹಿನಿ, ದಾವಣಗೆರೆ: ಜಾತಿಗಣತಿ ಕಾಲಂನಲ್ಲಿ ಎಲ್ಲಾ ಒಳಪಂಗಡಗಳು ವೀರಶೈವ ಲಿಂಗಾಯತ ಎಂದು ಬರೆಸಬೇಕು. ಅಲ್ಲದೇ, ಒಬಿಸಿಗೆ ಸೇರಿಸಲು ಕೇಂದ್ರಕ್ಕೆ ಒತ್ತಾಯ ಮಾಡುತ್ತೇವೆ ಎಂದು ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ತಿಳಿಸಿದರು. ದಾವಣಗೆರೆಯಲ್ಲಿ ನಡೆದ ಎರಡು ದಿನಗಳ ಶೃಂಗ ಸಮ್ಮೇಳನದ ಮುಕ್ತಾಯದ ಬಳಿಕ ಮಾತನಾಡಿದ ಅವರು, ಮುಂದಿನ ಶೃಂಗ ಸಮ್ಮೇಳನವನ್ನು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಮಾಡಲು ತೀರ್ಮಾನ ಮಾಡಲಾಗಿದೆ. ಜಾತಿಗಣತಿ ವಿಚಾರವಾಗಿ ಈಗಾಗಲೇ ವೀರಶೈವ ಲಿಂಗಾಯತ ಮಹಾಸಭೆ ಸ್ಫಷ್ಟಪಡಿಸಿದೆ. ಜಾತಿಗಣತಿ ಕಾಲಂನಲ್ಲಿ ಎಲ್ಲ ಒಳಪಂಗಡಗಳು ವೀರಶೈವ ಲಿಂಗಾಯತ ಎಂದು ಬರೆಸಬೇಕು. ಇವುಗಳೆಲ್ಲ ಮುಖ್ಯವಾಹಿನಿಗೆ ಬರಬೇಕು. ಮುಂದಿನ ದಿನಗಳಲ್ಲಿ ಪೀಠಗಳು, ಮಠಾಧೀಶರು ಹಾಗೂ ಎಲ್ಲಾ ಪಕ್ಷದ ರಾಜಕೀಯ ಮುಖಂಡರು ಸೇರಿ ಬೃಹತ್ ಸಮ್ಮೇಳನ ಮಾಡಲಾಗುವುದು. ಅದು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಮಾಡಲು ತೀರ್ಮಾನಿಸಲಾಗಿದೆ. ಈ ಶೃಂಗ ಸಮ್ಮೇಳನದಲ್ಲಿ ಬಂದ ಎಲ್ಲ ರಾಜಕೀಯ ಮುಖಂಡರು ಸಹಮತ ವ್ಯಕ್ತಪಡಿಸಿದ್ದಾರೆ. 12 ನಿರ್ಣಯಗಳನ್ನು ಈ ಶೃಂಗ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಕೇಂದ್ರ ಸರ್ಕಾರಕ್ಕೆ ಕೂಡ ವೀರಶೈವ ಲಿಂಗಾಯತರನ್ನು ಒಬಿಸಿ ಪಟ್ಟಿಯಲ್ಲಿ ಸೇರಿಸಲು ಒತ್ತಾಯ ಮಾಡಲಾಗುವುದು ಎಂದರು.
ಶೃಂಗ ಸಮ್ಮೇಳನ ಯಶಸ್ವಿಯಾಗಿದೆ ಎಂದ ಕಾಶಿ ಶ್ರೀ: ಇಲ್ಲಿ ನಡೆದ ಶೃಂಗ ಸಮ್ಮೇಳನ ಯಶಸ್ವಿಯಾಗಿದೆ. ಎರಡು ದಿನಗಳ ಕಾರ್ಯಕ್ರಮ ಸಮಗ್ರ ವೀರಶೈವ ಲಿಂಗಾಯತರ ಒಗ್ಗಟ್ಟನ್ನು ಇಲ್ಲಿ ಪ್ರದರ್ಶನ ಮಾಡಲಾಯಿತು ಎಂದು ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ಮುಂದಿನ ಶೃಂಗ ಸಮ್ಮೇಳನವನ್ನು ಪೀಠಾಧೀಶರು ಹಾಗೂ ವಿರಕ್ತರು ಸೇರಿಕೊಂಡು ಮಾಡಲಾಗುವುದು. ಅದನ್ನು ಎಲ್ಲಾ ಪೀಠಾಧೀಶರು ಹಾಗೂ ವಿರಕ್ತರು ಸೇರಿ ನಿರ್ಣಯ ಕೈಗೊಳ್ಳುತ್ತಾರೆ. ಎಲ್ಲರನ್ನು ಕೂಡಿಸುವ ಕೆಲಸ ಮುಂದಿದೆ ಎಂದ ಶ್ರೀಗಳು ತಿಳಿಸಿದರು.ಮೀಸಲಾತಿ ಆಸೆ ತೋರಿಸಿ ಬೇರೆ ಬೇರೆ ಮಾಡಿದ್ದಾರೆ ಎಂದ ಉಜ್ಜಯಿನಿ ಶ್ರೀ: ಜಾತಿಗಣತಿ ಹಾಗೂ ಜನಗಣತಿಯಲ್ಲಿರುವ ಗೊಂದಲ ನಿವಾರಿಸುವ ಉದ್ದೇಶದಿಂದ ಈ ಶೃಂಗ ಸಮ್ಮೇಳನ ಆಯೋಜನೆ ಮಾಡಲಾಗಿತ್ತು. ವೀರಶೈವ ಲಿಂಗಾಯತ ಸಮಾಜದಲ್ಲಿ ಹಲವು ಉಪ ಪಂಗಡಗಳಿವೆ. ಸರ್ಕಾರಗಳು ಬದಲಾಗುತ್ತಾ ಮೀಸಲಾತಿ ಆಸೆ ತೋರಿಸಿ ಬೇರೆ ಬೇರೆ ಮಾಡಿದ್ದಾರೆ ಎಂದು ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ ನುಡಿದರು.
