ಉದಯವಾಹಿನಿ, ಬೀಜಿಂಗ್ ಗಲ್ವಾನ್ ಕಣಿವೆಯಲ್ಲಿ ನಡೆದ ಸೇನಾ ಸಂಘರ್ಷದ ಬಳಿಕ ಹದಗೆಟ್ಟಿದ್ದ ಚೀನಾ ಮತ್ತು ಭಾರತ ದ್ವಿಪಕ್ಷೀಯ ಸಂಬಂಧ ಇದೀಗ ಸುಧಾರಣೆ ಕಂಡ ಬೆನ್ನಲ್ಲೇ ಭಾರತವು ಚೀನಾ ಪ್ರವಾಸಿಗರಿಗೆ ಪ್ರವಾಸಿ ವೀಸಾ ನೀಡುವ ಕಾರ್ಯಕ್ಕೆ ಮತ್ತೆ ಚಾಲನೆ ನೀಡಿದೆ. ಐದು ವರ್ಷಗಳ ನಂತರ ಚೀನಾ ನಾಗರೀಕರಿಗೆ ವೀಸಾ ನೀಡುವಿಕೆ ಕಾರ್ಯವನ್ನು ಈ ವಾರದಿಂದ ಆರಂಭಿಸಲಾಗಿದೆ ಎಂದು ಭಾರತ ತಿಳಿಸಿದೆ.
ಕೋವಿಡ್ 19 ಸಾಂಕ್ರಾಮಿಕದ ಬಳಿಕ ಚೀನಾ ಪ್ರಜೆಗಳಿಗೆ ಭಾರತೀಯ ಪ್ರವಾಸಿ ವೀಸಾ ನೀಡುವ ಕಾರ್ಯಕ್ಕೆ ತಡೆ ನೀಡಲಾಗಿತ್ತು. ಪೂರ್ವ ಲಡಾಖ್ ಗಡಿಯಲ್ಲಿ ಸಂಘರ್ಷದಿಂದ ಈ ನಿರ್ಬಂಧ ಮುಂದುವರೆದಿತ್ತು. ಚೀನಾ ನಾಗರಿಕರು ಪ್ರವಾಸಿ ವೀಸಾಕ್ಕೆ ಅರ್ಜಿ ಸಲ್ಲಿಸಬಹುದು. ಬೀಜಿಂಗ್, ಶಾಂಘೈ ಮತ್ತು ಗುವ್ಹಾಂಗ್ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಬೀಜಿಂಗ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ. ಇತ್ತೀಚಿಗೆ ಬೀಜಿಂಗ್ನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಮತ್ತು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಭೇಟಿಯಾಗಿ, ರಾಜತಾಂತ್ರಿಕ ಸಂಬಂಧ ಸುಧಾರಣೆ ಕುರಿತು ಚರ್ಚಿಸಿದ ನಂತರ ಈ ಬೆಳವಣಿಗೆ ನಡೆದಿದೆ. ಜುಲೈ 14-15ರಂದು ಚೀನಾಗೆ ಪ್ರವಾಸ ಕೈಗೊಂಡಿದ್ದ ಜೈಶಂಕರ್ ಶಾಂಘೈ ಸಹಕಾರ ಸಂಘಟನೆ ಸಮಾವೇಶದಲ್ಲಿ ಭಾಗಿಯಾಗಿದ್ದರು.
