ಉದಯವಾಹಿನಿ, ಖೈಬರ್ ಪಖ್ತುಂಖ್ವಾ(ಪಾಕಿಸ್ತಾನ): ಸೋಮವಾರ ಸುರಿದ ಭಾರೀ ಮಳೆಗೆ ಉಂಟಾದ ಹಠಾತ್ ಪ್ರವಾಹಕ್ಕೆ ಖೈಬರ್ ಪಖ್ತುಂಖ್ವಾದ ಸ್ವಾತ್ ಜಿಲ್ಲೆಯಲ್ಲಿ ನಾಲ್ಕು ಮಕ್ಕಳು ಸಾವನ್ನಪ್ಪಿದ್ದು, ಒಂದು ಮಗು ಕಾಣೆಯಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಧಾರಾಕಾರ ಮಳೆಗೆ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಭೂಕುಸಿತ ಹಾಗೂ ಪ್ರವಾಹಗಳು ಉಂಟಾಗಿ, ಜನಜೀವನ ಅಸ್ತವ್ಯಸ್ತಗೊಂಡಿದೆ. ಕಾಣೆಯಾದ ಮಗುವನ್ನು ಪತ್ತೆಹಚ್ಚಲು ರಕ್ಷಣಾ ತಂಡಗಳು ಪ್ರಯತ್ನಿಸುತ್ತವೆ.ಭಾರಿ ಪ್ರವಾಹದಿಂದ ಗುಡ್ಡ ಕುಸಿತ, ಮೂವರು ಮಕ್ಕಳ ದುರ್ಮರಣ: ಮದ್ಯಾನ್ನ ದೂರದ ಶಂಕೋ ಪ್ರದೇಶದಲ್ಲಿ ಮನೆ ಮೇಲೆ ಗುಡ್ಡ ಕುಸಿದು ಬಿದ್ದ ಪರಿಣಾಮ ಮೂವರು ಮಕ್ಕಳು ಸಾವನ್ನಪ್ಪಿದ್ದು, ಮಕ್ಕಳ ತಾಯಿ ಗಾಯಗೊಂಡಿದ್ದಾರೆ. ಮಲಮ್ ಜಬ್ಬಾದ ಸೋಧರ್ ಪ್ರದೇಶದಲ್ಲಿ, ಇಬ್ಬರು ಮಕ್ಕಳು ಹಠಾತ್ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ಅವರಲ್ಲಿ ಒಬ್ಬ 7 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ ಎಂದು ದೃಢಪಡಿಸಲಾಗಿದೆ. ಆದರೆ ಇನ್ನೊಬ್ಬ ಬಾಲಕ ಕಾಣೆಯಾಗಿದ್ದಾನೆ ಎಂದು ವರದಿಯಾಗಿದೆ.
ನಿರಂತರ ಮಳೆ, ತಗ್ಗು ಪ್ರದೇಶಗಳು ಮುಳುಗಡೆ, ಎಲ್ಲೆಲ್ಲೂ ನೀರೋ ನೀರು: ಮೇಲಿನ ಪ್ರದೇಶಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಸ್ವಾತ್ ನದಿಯ ತಗ್ಗು ಪ್ರದೇಶಗಳಲ್ಲಿ ನೀರಿನಮಟ್ಟ ಏರಿಕೆಯಾಗುತ್ತಿದೆ. ಪರಿಣಾಮ ತಗ್ಗು ಪ್ರದೇಶದ ನಿವಾಸಿಗಳು ಸ್ಥಳಾಂತರಗೊಳ್ಳಲು ಪ್ರಾರಂಭಿಸಿದ್ದಾರೆ. ಆಡಳಿತ ಯಾವುದೇ ಪೂರ್ವ ಪ್ರವಾಹ ಎಚ್ಚರಿಕೆ ಅಥವಾ ಇತರ ಯಾವುದೇ ಎಚ್ಚರಿಕೆಯನ್ನು ನೀಡಿಲ್ಲ ಎಂದು ಸ್ಥಳೀಯ ನಿವಾಸಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏತನ್ಮಧ್ಯೆ, ಗಿಲ್ಗಿಟ್ – ಬಾಲ್ಟಿಸ್ತಾನ್‌ನ ಪರ್ವತ ಕಣಿವೆಯಾದ ಬಾಬುಸರ್ ಟಾಪ್‌ನಲ್ಲಿ ಮೇಘಸ್ಫೋಟದಿಂದ ಉಂಟಾದ ತೀವ್ರ ಭೂಕುಸಿತ ಮತ್ತು ಹಠಾತ್ ಪ್ರವಾಹದಲ್ಲಿ ಕನಿಷ್ಠ ಮೂವರು ಪ್ರವಾಸಿಗರು ಸಾವನ್ನಪ್ಪಿದ್ದಾರೆ ಮತ್ತು 15 ಮಂದಿ ಕಾಣೆಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.ಮೇಘಸ್ಫೋಟದಿಂದಾಗಿ ಬಾಬುಸರ್ ಟಾಪ್ ಸುತ್ತಮುತ್ತ 7 ರಿಂದ 8 ಕಿಲೋಮೀಟರ್ ವ್ಯಾಪ್ತಿಯಲ್ಲಿ ತೀವ್ರ ಪ್ರವಾಹ ಮತ್ತು ಭೂಕುಸಿತ ಉಂಟಾಗಿದ್ದು, 14 ರಿಂದ 15 ವಿವಿಧ ಸ್ಥಳಗಳಲ್ಲಿ ರಸ್ತೆಗಳು ಮುಚ್ಚಿ ಹೋಗಿವೆ.
