ಉದಯವಾಹಿನಿ, ಬೆಂಗಳೂರು: ಅಭಿನಯ ಸರಸ್ವತಿ ಎಂದೇ ಖ್ಯಾತರಾದ, ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟಿ ಬಿ.ಸರೋಜಾ ದೇವಿ ಸದ್ಯ ನೆನಪು ಮಾತ್ರ. ದಕ್ಷಿಣ ಭಾರತದ ಧೀಮಂತ ಅಭಿನೇತ್ರಿಯಲ್ಲೊಬ್ಬರಾಗಿ ಗುರುತಿಸಿಕೊಂಡ ಇವರು ಇದೇ ಜುಲೈ 14ರ ಮುಂಜಾನೆ ಕೊನೆಯುಸಿರೆಳೆದರು. ಇದೀಗ, ಬಿ. ಸರೋಜಾದೇವಿ ಹೆಸರಿನಲ್ಲಿ ಚಲನಚಿತ್ರ ಪ್ರಶಸ್ತಿ ಘೋಷಣೆ ಮಾಡಬೇಕೆಂದು ಮನವಿ ಮಾಡಲಾಗಿದೆ.
ಸಿಎಂ ಸಿದ್ದರಾಮಯ್ಯ ಭೇಟಿಯಾದ ತಾರಾ: ಇಂದು ಹಿರಿಯ ನಟಿ, ಬಿಜೆಪಿ ಮುಖಂಡರಾದ ತಾರಾ ಅನುರಾಧ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ಸಾರ್ವಜನಿಕ ಅಹವಾಲು ಸ್ವೀಕರಿಸಿದ ಸಿಎಂ: ಸಿಎಂ ಸರ್ಕಾರಿ ನಿವಾಸ ಕಾವೇರಿಯಲ್ಲಿ ಸಿಎಂ ಅವರನ್ನು ಭೇಟಿ ಮಾಡಿದ ತಾರಾ, ಹಿರಿಯ ಕಲಾವಿದೆ ದಿ.ಬಿ. ಸರೋಜಾದೇವಿ ಅವರ ಹೆಸರಿನಲ್ಲಿ ಚಲನಚಿತ್ರ ಪ್ರಶಸ್ತಿ ಘೋಷಣೆ ಮಾಡುವಂತೆ ಮನವಿ ಸಲ್ಲಿಸಿದರು. ನಂತರ ಮುಖ್ಯಮಂತ್ರಿ ಸಾರ್ವಜನಿಕ ಅಹವಾಲು ಸ್ವೀಕರಿಸಿದರು. ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ತಿಳಿದುಕೊಂಡ ಸಿಎಂ, ಜನರ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದರು.
ಸಿಎಂ ಪೋಸ್ಟ್: ಸಿಎಂ ಅವರ ಅಧಿಕೃತ ಎಕ್ಸ್ ಖಾತೆಯಿಂದ ಶೇರ್ ಆದ ಪೋಸ್ಟ್ನಲ್ಲಿ, ”ಹಿರಿಯ ಕಲಾವಿದೆ ಬಿ. ಸರೋಜಾದೇವಿ ಅವರ ಹೆಸರಿನಲ್ಲಿ ಚಲನಚಿತ್ರ ಪ್ರಶಸ್ತಿ ಘೋಷಣೆ ಮಾಡುವಂತೆ ನಟಿ ತಾರಾ ಅನುರಾಧ ಅವರು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು” ಎಂದು ಬರೆಯಲಾಗಿದೆ. ಇಲ್ಲಿ ತಾರಾ ಅವರು ಮನವಿ ಪತ್ರ ಸಲ್ಲಿಸುತ್ತಿರುವ ಫೋಟೋವನ್ನೂ ಕಾಣಬಹುದು.”ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕಾವೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಆದ್ಯತೆ ಮೇರೆಗೆ ಅವುಗಳನ್ನು ಬಗೆಹರಿಸಿಕೊಡುವುದಾಗಿ ತಿಳಿಸಿದರು” ಎಂದು ಬರೆಯಲಾಗಿದೆ. ಇಲ್ಲಿ ಜನರ ಸಮಸ್ಯೆಗಳನ್ನು ಸಿಎಂ ಆಲಿಸುತ್ತಿರುವ ಫೋಟೋವನ್ನು ಹಂಚಿಕೊಳ್ಳಲಾಗಿದೆ.
