ಉದಯವಾಹಿನಿ, ಗಾಜಾಪಟ್ಟಿ: ಯುದ್ದ ಪೀಡಿತ ಪ್ಯಾಲೆಸ್ತೇನಿಯನ್ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಅಪೌಷ್ಟಿಕತೆ ಮತ್ತು ಹಸಿವಿನಿಂದ ಸುಮಾರು 21 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಆಸ್ಪತ್ರೆಯ ಮುಖ್ಯಸ್ಥರೊಬ್ಬರು ತಿಳಿಸಿದ್ದಾರೆ.
ಪ್ಯಾಲೆಸ್ತೇನಿನಲ್ಲಿ ಇಸ್ರೇಲ್ ವಿನಾಶಕಾರಿ ದಾಳಿ ನಡೆಸಿದ್ದು, ಗಾಜಾದ ಎರಡು ಮಿಲಿಯನ್ಗೂ ಹೆಚ್ಚು ಜನರು ಆಹಾರ ಮತ್ತು ಅಗತ್ಯ ವಸ್ತುಗಳ ಕೊರತೆ ಅನುಭವಿಸಿದ್ದಾರೆ. ಜೊತೆಗೆ ಮಾನವೀಯ ನೆರವಿಗಾಗಿ ವಿತರಣಾ ಕೇಂದ್ರಗಳಿಗೆ ಹೋದರೆ ಅಲ್ಲಿಯೂ ಆಗಾಗ್ಗೆ ದಾಳಿಗೆ ಒಳಗಾಗಿ ಸಾವನ್ನಪ್ಪುತ್ತಿದ್ದಾರೆ.ಗಾಜಾ ಪಟ್ಟಿಯಲ್ಲಿ ಕಳೆದ ಮೂರು ದಿನದಲ್ಲಿ ಅಪೌಷ್ಟಿಕಾಂಶಕತೆ ಮತ್ತು ಹಸಿವಿನಿಂದ 21 ಜನರು ಸಾವನ್ನಪ್ಪಿದ್ದಾರೆ. ಗಾಜಾದಲ್ಲಿ ಈ ಸಂಬಂಧ ಸಂಭವಿಸುತ್ತಿರುವ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ಗಾಜಾದಲ್ಲಿನ ಎಐ- ಶಿಫಾ ವೈದ್ಯಕೀಯ ಆಸ್ಪತ್ರೆ ಮುಖ್ಯಸ್ಥ ಮೊಹಮ್ಮದ್ ಅಬು ಸಲ್ಮಿಯಾ ತಿಳಿಸಿದ್ದಾರೆ.
ಭಯಾನಕ ಘಟನೆ: ಈ ಘಟನೆಗಳನ್ನು ಭಯಾನಕ ಎಂದು ಕರೆದಿರುವ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್, ಇತ್ತೀಚಿನ ದಿನಗಳಲ್ಲಿ ಈ ರೀತಿಯ ಸಾವು ಮತ್ತು ವಿನಾಶ ಸಂಭವಿಸಿದೆ ಎಂದು ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ. ಆರು ವಾರಗಳ ಕದನ ವಿರಾಮವನ್ನು ವಿಸ್ತರಿಸುವ ಮಾತುಕತೆಗಳು ಮುರಿದುಬಿದ್ದ ನಂತರ, ಇಸ್ರೇಲ್ ಮಾರ್ಚ್ 2 ರಂದು ಗಾಜಾದ ಮೇಲೆ ಸಂಪೂರ್ಣ ದಿಗ್ಬಂಧನ ವಿಧಿಸಿದ ಪರಿಣಾಮ ಮೇ ಅಂತ್ಯದಲ್ಲಿ ಯಾವುದೇ ನೆರವಿನ ಟ್ರಕ್‌ಗಳಿಗೆ ಪ್ರವೇಶಿಸಲು ಅನುಮತಿ ನಿರಾಕರಿಸಲಾಗಿತ್ತು. ಪರಿಣಾಮ ಕದನ ವಿರಾಮದ ಸಮಯದಲ್ಲಿ ಸಂಗ್ರಹಿಸಿದ್ದ ದಾಸ್ತಾನುಗಳು ನಿಧಾನವಾಗಿ ಖಾಲಿಯಾಯಿತು.
