ಉದಯವಾಹಿನಿ, ನವದೆಹಲಿ: ಬಹುನಿರೀಕ್ಷಿತ 2025ರ ಏಷ್ಯಾಕಪ್‌ ಟೂರ್ನಿಯನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಆಯೋಜಿಸಲಿದೆ. ಪಾಕಿಸ್ತಾನ ಜತೆಗಿನ ರಾಜಕೀಯ ಭಿನ್ನಭಿಪ್ರಾಯದಿಂದ ಭಾರತ ತಂಡ ಈ ಟೂರ್ನಿಯನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸಲು ಒಪ್ಪಿಕೊಂಡಿದೆ. ಏಕೆಂದರೆ, ಇತ್ತೀಚೆಗೆ ಫೆಹಲ್ಗಾಮ್‌ ದಾಳಿಯ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವಣ ರಾಜಕೀಯ ಸಂಬಂಧ ಇನ್ನಷ್ಟು ಹದಗೆಟ್ಟಿತ್ತು. ಅಲ್ಲದೆ ಈ ವರ್ಷದ ಆರಂಭದಲ್ಲಿ ನಡೆದಿದ್ದ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯನ್ನು ಆಡಲು ಭಾರತ ತಂಡ, ಪಾಕಿಸ್ತಾನಕ್ಕೆ ಹೋಗಿರಲಿಲ್ಲ ಹಾಗೂ ತನ್ನೆಲ್ಲಾ ಪಂದ್ಯಗಳನ್ನು ಯುಎಇಯ ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಆಡಿತ್ತು. ಆ ಮೂಲಕ ಚಾಂಪಿಯನ್‌ ಆಗಿ ಹೊರ ಹೊಮ್ಮಿತ್ತು.

ಗುರುವಾರ ಬಾಂಗ್ಲಾದೇಶದ ಢಾಕಾದಲ್ಲಿ ಏಷ್ಯಾ ಕ್ರಿಕೆಟ್‌ ಕೌನ್ಸಿಲ್‌ ವಾರ್ಷಿಕ ಸಭೆಯನ್ನು ಏರ್ಪಡಿಸಿತ್ತು. ಬಿಸಿಸಿಐನ ಅಧಿಕಾರಿಗಳು ಆನ್‌ಲೈನ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು. ಮುಂದಿನ ಐಸಿಸಿ ಟಿ20 ವಿಶ್ವಕಪ್‌ ನಿಮಿತ್ತ ಈ ಬಾರಿ ಏಷ್ಯಾ ಕಪ್‌ ಟೂರ್ನಿಯನ್ನು ಟಿ20 ಸ್ವರೂಪದಲ್ಲಿ ಆಯೋಜಿಸಲಾಗಿದೆ. ಅಂದ ಹಾಗೆ ಈ ಟೂರ್ನಿಯಲ್ಲಿ ಸಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿ ಕಾಣಿಸಿಕೊಳ್ಳಲಿದೆ ಎಂದು ಕೂಡ ವರದಿಯಾಗಿದೆ. ಪಾಕಿಸ್ತಾನ ತಂಡದ ಪಂದ್ಯಗಳನ್ನು ಬಿಸಿಸಿಐ, ದುಬೈ ಇಂಟರ್‌ನ್ಯಾಷನಲ್‌ ಕ್ರೀಡಾಮಗಣದ ಹಾಗೂ ಅಬುದಾಬಿಯಲ್ಲಿ ಆಯೋಜಿಸಲು ಬಿಸಿಸಿಐ ಒಪ್ಪಿಕೊಂಡಿದೆ ಎಂದು ವರದಿಯಾಗಿದೆ.

ಎಂಟು ತಂಡಗಳ ಏಷ್ಯಾ ಕಪ್‌ ಟೂರ್ನಿಯ ಆತಿಥ್ಯದ ಹಕ್ಕು ಬಿಸಿಸಿಐಗೆ ಇದೆ. ಜಮ್ಮು ಮತ್ತು ಕಾಶ್ಮೀರದ ಫೆಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಕೊಂದ ಭಯೋತ್ಪಾದಕ ದಾಳಿಯ ನಂತರ ಭಾರತ ತಂಡ, ಏಷ್ಯಾ ಕಪ್‌ ಟೂರ್ನಿಯಲ್ಲಿ ಭಾಗವಹಿಸುವುದಿಲ್ಲ ಅಥವಾ ಆತಿಥ್ಯ ವಹಿಸುವುದಿಲ್ಲ ಎಂದು ಮೂಲಗಳು ಮೇ ತಿಂಗಳಲ್ಲಿ ತಿಳಿಸಿದ್ದವು. ಆದರೆ, ಇದೀಗ ಬಿಸಿಸಿಐ ಏಷ್ಯಾ ಕಪ್‌ ಟೂರ್ನಿಯನ್ನು ಆಯೋಜಿಸುತ್ತಿದೆ. ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಮುಂದಿನ ದಿನಗಳಲ್ಲಿ ಸಭೆ ಸೇರಿ ಸ್ಥಳಗಳು ಮತ್ತು ಪಂದ್ಯಾವಳಿಯ ವೇಳಾಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ ಎಂದು ಇಂಡಿಯಾ ಟುಡೇ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!