ಉದಯವಾಹಿನಿ,ಬೆಂಗಳೂರು: 16ನೇ ವಿಧಾನಸಭೆಗೆ ಮೊದಲ ಬಾರಿಗೆ ನೂತನವಾಗಿ ಆಯ್ಕೆಯಾದ 70 ಶಾಸಕರಿಗೆ 3 ದಿನಗಳ ಕಾಲ ತರಬೇತಿ ಶಿಬಿರ ಏರ್ಪಡಿಸಲಾಗಿದೆ. ಜೂ.26ರಿಂದ ಜೂ.28ರವರೆಗೆ ಮೂರು ದಿನಗಳ ಕಾಲ ನಡೆಯುವ ತರಬೇತಿ ಶಿಬಿರದಲ್ಲಿ ಈ ನೂತನ ಶಾಸಕರಿಗೆ ಆರೋಗ್ಯ ಸುಸ್ಥಿರತೆ ಮತ್ತು ಜ್ಞಾನಾಭಿವೃದ್ಧಿಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗುತ್ತದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ತಿಳಿಸಿದರು. ವಿಧಾನಸೌಧದದ ಸಮ್ಮೇಳನ ಸಭಾಂಗಣದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಯುವ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಸದೀಯ ಕಲಾಪಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಉದ್ದೇಶದಿಂದ ಮತ್ತು ಯುವಜನರ ಆಲೋಚನೆಗಳು, ದೂರದೃಷ್ಟಿ, ಪ್ರತಿಭೆ ಬಿಂಬಿಸಲು ನಮ್ಮ ಸಚಿವಾಲಯದ ಮುಖಾಂತರ 03ದಿವಸಗಳ ಕಾಲ ಪ್ರಕೃತಿ ಮತ್ತು ತರಬೇತಿ ಶಿಬಿರವನ್ನು ನೆಲಮಂಗಲದ ಸಮೀಪದ ಧರ್ಮಸ್ಥಳ ಕ್ಷೇಮವನದಲ್ಲಿ ನಡೆಸಲಾಗುತ್ತದೆ. ಈಗಾಗಲೇ ಮೊದಲ ಬಾರಿಗೆ ನೂತನವಾಗಿ ಆಯ್ಕೆಯಾದ ಶಾಸಕರಿಗೆ ಮಾಹಿತಿ ನೀಡಲಾಗಿದ್ದು, ತಮ್ಮೆಲ್ಲ ಕೆಲಸಗಳನ್ನು ಬದಿಗೊತ್ತಿ ಸಕ್ರಿಯವಾಗಿ ಈ ತರಬೇತಿ ಶಿಬಿರದಲ್ಲಿ ಭಾಗವಹಿಸುವ ಮೂಲಕ ಈ ತರಬೇತಿ ಶಿಬಿರವನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಮನವಿ ಮಾಡಿದರು.
